ಅಮೆರಿಕದಿಂದ ಭಾರತಕ್ಕೆ ಶಸ್ತ್ರಸಜ್ಜಿತ ಡ್ರೋನ್‌ಗಳ ಪೂರೈಕೆಗೆ ಪಾಕ್ ವಿರೋಧ
ಇಸ್ಲಾಮಾಬಾದ್, ಅ. 28: ಅಮೆರಿಕ ಭಾರತಕ್ಕೆ ಶಸ್ತ್ರಸಜ್ಜಿತ ಡ್ರೋನ್‌ಗಳನ್ನು ಪೂರೈಸುವುದನ್ನು ಪಾಕಿಸ್ತಾನ ಶನಿವಾರ ವಿರೋಧಿಸಿದೆ. ಇದು ‘ಸೇನಾ ದುಸ್ಸಾಹಸ’ಗಳ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಹಾಗೂ ಅಂತಿಮವಾಗಿ ಈ ವಲಯದಲ್ಲಿ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ಅದು ಎಚ್ಚರಿಸಿದೆ.
ತನ್ನ ವಾಯುಪಡೆಯ ಆಧುನೀಕರಣಕ್ಕಾಗಿ ಶಸ್ತ್ರಸಜ್ಜಿತ ಡ್ರೋನ್‌ಗಳನ್ನು ಪೂರೈಸಬೇಕೆಂಬ ಭಾರತದ ಮನವಿಯನ್ನು ಅಮೆರಿಕ ಪರಿಶೀಲಿಸುತ್ತಿರುವುದಾಗಿ ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ ಕೆಲವು ದಿನಗಳ ಬಳಿಕ, ಪಾಕಿಸ್ತಾನದ ವಿದೇಶ ಕಚೇರಿಯ ವಕ್ತಾರರು ಈ ಹೇಳಿಕೆ ನೀಡಿದ್ದಾರೆ.
‘‘ಶಸ್ತ್ರಸಜ್ಜಿತ ಡ್ರೋನ್‌ಗಳ ಬಳಕೆಯು ಸಂಘರ್ಷ ಸಾಧ್ಯತೆಯನ್ನು ಹೆಚ್ಚಿಸಬಹುದು. ಯಾಕೆಂದರೆ ಅದು ಸೇನಾ ದುಸ್ಸಾಹಸಗಳಿಗೆ ಬೆಂಬಲ ನೀಡುತ್ತದೆ’’ ಎಂದು ಪಾಕ್ ವಿದೇಶ ಕಚೇರಿಯ ವಕ್ತಾರ ನಫೀಸ್ ಝಕಾರಿಯ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ವ್ಯಾಪಾರದ ಸಮಯದಲ್ಲಿ ಪ್ರಾದೇಶಿಕ ಸ್ಥಿರತೆಯನ್ನು ಪ್ರಮುಖವಾಗಿ ಪರಿಗಣಿಸಬೇಕೆನ್ನುವುದನ್ನು ಪಾಕಿಸ್ತಾನ ನಿರಂತರವಾಗಿ ಪ್ರತಿಪಾದಿಸುತ್ತಾ ಬಂದಿದೆ ಎಂದು ಝಕಾರಿಯ ಹೇಳಿದರು.