ವಾಸ್ಕೋ ಡ ಗಾಮ ಜಿಪಿಎಸ್ ಬಳಸಿ ಭಾರತ ತಲುಪಿದ್ದನೇ?
ಅಮೆರಿಕ, ಅ.28: ಭಾರತದ ಕಲ್ಲಿಕೋಟೆಯನ್ನು ತಲುಪಲು ಪೋರ್ಚುಗೀಸ್ ನಾವಿಕ ವಾಸ್ಕೋ ಡ ಗಾಮ ಜಿಪಿಎಸ್ ಅನ್ನು ಬಳಸಿದ್ದನೇ? ಎನ್ನುವ ಪ್ರಶ್ನೆಗೆ ಹೌದು ಎಂದು ಉತ್ತರಿಸುತ್ತಾರೆ ಅಮೆರಿಕ ಮೂಲದ ಸಂಶೋಧಕರು.
ಹಿಂದೂ ಮಹಾಸಾಗರದಲ್ಲಿ ಅಪಘಾತಕ್ಕೀಡಾಗಿದ್ದ ಹಡಗೊಂದರಲ್ಲಿ 2014ರಲ್ಲಿ ಸಿಕ್ಕಿದ್ದ ‘ಅಸ್ಟ್ರೋಲೇಬ್’ ಎಂದು ಕರೆಯಲ್ಪಡುವ ಕಂಚಿನ ತುಂಡೊಂದು ಜಿಪಿಎಸ್ ಆಗಿತ್ತು ಎಂದು ಈ ಸಂಶೋಧಕರ ವರದಿ ತಿಳಿಸುತ್ತದೆ.
17.5 ಸೆಂಟಿ ಮೀಟರ್ ನ ಈ ಸಾಧನದಲ್ಲಿ 1495ರಿಂದ 1521ರ ನಡುವಿನ ಪೋರ್ಚುಗಲ್ ರಾಜರ ಲಾಂಛನವನ್ನು ಕೆತ್ತಲಾಗಿದೆ. 15ನೆ ಶತಮಾನದ ಈ ಅಸ್ಟ್ರೋಲೇಬ್ ಅನ್ನು ಅಂದಿನ ನಾವಿಕರು ಸೂರ್ಯನ ಎತ್ತರವನ್ನು ಅಳೆಯಲು ಬಳಸುತ್ತಿದ್ದರು ಎಂದು ಪ್ರೊ.ಮಾರ್ಕ್ ವಿಲಿಯಮ್ಸ್ ಎಂಬವರು ಹೇಳಿದ್ದಾರೆ.
ಆರಂಭದಲ್ಲಿ ಇದು ಸಿಕ್ಕಿದ್ದ ವೇಳೆ ಸಂಶೋಧಕರ ತಂಡಕ್ಕೆ ಇದರಲ್ಲಿ ವಿಶೇಷವಾದುದೇನೂ ಕಾಣಿಸಿರಲಿಲ್ಲ. ನಂತರ ಪ್ರೊ.ವಿಲಿಯಮ್ಸ್ ಬಳಿ ಇದನ್ನು ಒಯ್ದಿದ್ದು, ಅವರ ಲ್ಯಾಬ್ ನಲ್ಲಿ ಈ ವಸ್ತುವನ್ನು ಪರೀಕ್ಷಿಸಲಾಗಿದೆ. ಈ ಅಸ್ಟ್ರೋಲೇಬ್ ನ ಅಂಚುಗಳಲ್ಲಿ 5 ಡಿಗ್ರಿಗೊಂದರಂತೆ ಗೆರೆಗಳನ್ನು ಪ್ರೊ. ವಿಲಿಯಮ್ಸ್ ಪತ್ತೆ ಹಚ್ಚಿದರು. ಈ ಗೆರೆಗಳು ಸೂರ್ಯನ ಎತ್ತರವನ್ನು ಅಳೆಯಲು ನೆರವಾಗುತ್ತಿತ್ತು ಎನ್ನಲಾಗಿದೆ. ಇದೂ ಕೂಡ ಜಿಪಿಎಸ್ ನ ಕಾರ್ಯ ವಿಧಾನವನ್ನೇ ಹೊಂದಿದೆ ಎನ್ನುತ್ತಾರೆ ಸಂಶೋಧಕರು.