ಯು.ಟಿ.ಖಾದರ್ ಆಪ್ತ ಕಾರ್ಯದರ್ಶಿಗೆ ಹಲ್ಲೆ ಪ್ರಕರಣ : ಆರೋಪಿಗಳಿಗೆ 6 ತಿಂಗಳು ಜೈಲು ಶಿಕ್ಷೆ

Update: 2017-10-28 16:37 GMT

ಮಂಗಳೂರು, ಅ. 28: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರ ಆಪ್ತ ಕಾರ್ಯದರ್ಶಿ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆಗೈದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರಿಗೆ ಇಲ್ಲಿನ ವಿಶೇಷ ನ್ಯಾಯಾಲಯ ಹಾಗೂ 2ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶನಿವಾರ 6 ತಿಂಗಳು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಕುಂಪಲ ನಿವಾಸಿಗಳಾದ ವಿನೋದ್ ಕುಮಾರ್ (34) ಹಾಗೂ ಪ್ರಕಾಶ್ (36) ಶಿಕ್ಷೆಗೊಳಗಾದವರು. ಪ್ರಕರಣದ ಇನ್ನೋರ್ವ ಆರೋಪಿ ಸುಜೀರ್ (33) ತಲೆ ಮರೆಸಿಕೊಂಡಿದ್ದು, ಈತನ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಹಲ್ಲೆ ಪ್ರಕರಣದಲ್ಲಿ 6 ತಿಂಗಳು, ಜಾತಿ ನಿಂದನೆ ಮಾಡಿರುವುದಕ್ಕೆ 6 ತಿಂಗಳು, ಅವಾಚ್ಯ ಶಬ್ದಗಳಿಂದ ನಿಂದಿಸಿರುವುದಕ್ಕೆ 3 ತಿಂಗಳು ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಪ್ರಕರಣದ ಹಿನ್ನೆಲೆ

ಸಚಿವ ಯು.ಟಿ.ಖಾದರ್ ಅವರ ಆಪ್ತ ಕಾರ್ಯದರ್ಶಿ ಹಾಗೂ ಮಂಗಳೂರು ವಿವಿ ಉದ್ಯೋಗಿ ಕಾಪಿಕಾಡ್ ನಿವಾಸಿ ಪ್ರವೀಣ್ ಕುಮಾರ್ (37) ಅವರು 2010 ಎಪ್ರಿಲ್ 7ರಂದು ಆರೋಪಿಗಳಿಂದ ಹಲ್ಲೆಗೊಳಗಾಗಿದ್ದರು. ಅಂದು ರಾತ್ರಿ ಉಳ್ಳಾಲದ ಹೊಟೇಲೊಂದರಲ್ಲಿ ಸ್ನೇಹಿತ ರಾಜೇಶ್ ಎಂಬವರನ್ನು ಭೇಟಿಯಾಗಲು ಪ್ರವೀಣ್ ಕುಮಾರ್ ತೆರಳಿದ್ದಾಗ ಅಪರಾಧಿಗಳು ಅವರ ಮೇಲೆ ಕ್ಷುಲ್ಲಕ ವಿಷಯದಲ್ಲಿ ಸೋಡಾ ಬಾಟ್ಲಿಯಿಂದ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹಲ್ಲೆ, ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಪಣಂಬೂರು ಡಿವೈಎಸ್ಪಿಯಾಗಿದ್ದ ಗಿರೀಶ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಸರ್ವೋದಯ ಶೆಟ್ಟಿಗಾರ್ ಸಾಕ್ಷಿ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದಾರೆ. ಸರಕಾರಿ ಅಭಿಯೋಜಕ ಬಿ.ಶೇಖರ ಶೆಟ್ಟಿ ಸರಕಾರದ ಪರವಾಗಿ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News