ಪ್ರಧಾನಿ ಮೋದಿ ಸ್ವಾಗತಕ್ಕೆ ಉಜಿರೆ ಸಜ್ಜು
ಬೆಳ್ತಂಗಡಿ, ಅ.29: ಪ್ರಧಾನ ನರೇಂದ್ರ ಮೋದಿ ಅವರ ಆಗಮನಕ್ಕೆ ಉಜಿರೆ ಸಿದ್ದವಾಗಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ಕ್ರೀಡಾಂಗಣದತ್ತ ಹರಿದು ಬರುತ್ತಿದ್ದಾರೆ. ಪ್ರಧಾನಿಯಾದ ಬಳಿಕ ಜಿಲ್ಲೆಗೆ ಮೊದಲ ಭೇಟಿ ನೀಡಲಿರುವ ಮೋದಿ, ಬೆಳ್ತಂಗಡಿ ತಾಲೂಕಿಗೆ ಆಗಮಿಸುವ ಮೊದಲ ಪ್ರಧಾನಿ ಕೂಡಾ ಆಗಿದ್ದಾರೆ. ಅವರ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಕಾರ್ಯಕ್ರಮ ನಡೆಯುವ ಉಜಿರೆಯ ಕ್ರೀಡಾಂಗಣದತ್ತ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಲಾರಂಭಿಸಿದ್ದಾರೆ.
ಬೆಳಿಗ್ಗೆ ಎಂಟು ಗಂಟೆಯಿಂದಲೇ ಜನರು ಕ್ರೀಡಾಂಗಣದತ್ತ ಬರಲಾರಂಭಿಸಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಕರ್ತರು ಕಾರ್ಯಕ್ರಮ ವೀಕ್ಷಿಸಲು ಆಗಮಿಸುತ್ತಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ಬಿಜೆಪಿಯ ಹಿರಿಯು ಮುಖಂಡರು ಈಗಾಗಲೇ ಉಜಿರೆ ತಲುಪಿದ್ದಾರೆ. ಲಭ್ಯ ಮಾಹಿತಿಯಯನ್ವಯ ನಿಗದಿತ ಸಮಯಕ್ಕೆ ಪ್ರಧಾನಿ ಧರ್ಮಸ್ಥಳಕ್ಕೆ ಆಗಮಿಸಲಿದ್ದಾರೆ.
ಪ್ರಧಾನಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸ್ವಾಗತಿಸುವರು. ಧರ್ಮಸ್ಥಳ ದೇವಳಕ್ಕೆ ಭೇಟಿ ನೀಡುವ ಅವರು ಅಲ್ಲಿ ಪೂಜೆ ಸಲ್ಲಿಸಿದ ಬಳಿಕ ಉಜಿರೆಗೆ ಆಗಮಿಸಲಿದ್ದಾರೆ.