×
Ad

ಡಿಜಿಟಲ್ ಕರೆನ್ಸಿಯ ಯುಗ ಆರಂಭವಾಗಿದೆ: ಧರ್ಮಸ್ಥಳದಲ್ಲಿ ಪ್ರಧಾನಿ ಮೋದಿ

Update: 2017-10-29 13:20 IST

ಮಂಗಳೂರು, ಅ.29: ನಗದುರಹಿತ ವ್ಯವಹಾರದ ಸಂಸತ್‌ನಲ್ಲಿ ಹಿರಿಯ ರಾಜಕೀಯ ಮುಖಂಡರು, ಆರ್ಥಿಕ ತಜ್ಞರು ಎಂದು ಕರೆಸಿಕೊಂಡವರು ಟೀಕೆ ಮಾಡಿದ್ದರೂ ದೇಶದಲ್ಲಿ ಡಿಜಿಟಲ್ ವ್ಯವಹಾರದ ಯುಗ ಆರಂಭಗೊಂಡು ಚಲಾವಣೆಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

 ಉಜಿರೆಯ ಶ್ರೀ ಧರ್ಮಸ್ಥಳ ರತ್ನವವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿಂದು ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘಗಳ ಸದಸ್ಯರ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

 ದೇಶದಲ್ಲಿ ವಿವಿಧ ಕಾಲಘಟ್ಟದಲ್ಲಿ ಹಣದ ಚಲಾವಣೆ ವಿವಿಧ ರೀತಿಯಲ್ಲಿ ನಡೆದಿದೆ. ವಸ್ತುಗಳ ಮೂಲಕ, ಲೋಹಗಳ ಮೂಲಕ, ಕಾಗದದ ಕರೆನ್ಸಿಗಳು ವ್ಯವಹಾರಕ್ಕೆ ಬಳಕೆಯಾಗುತ್ತಿತ್ತು. ಈಗ ಕಾಲ ಬದಲಾಗಿದೆ ಡಿಜಿಟಲ್ ಯುಗಕ್ಕೆ ಕಾಲಿಟ್ಟಿದ್ದೇವೆ. ನಗದು ರಹಿತ ವ್ಯವಹಾರ ಆರಂಭಿಸುವ ಬಗ್ಗೆ ಸಂಸತ್‌ನಲ್ಲಿ ದೊಡ್ಡ ದೊಡ್ಡ ವ್ಯಕ್ತಿಗಳು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದರು. ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ 12ಲಕ್ಷ ಸ್ವ ಸಹಾಯ ಸಂಘದ ಸದಸ್ಯರಿಗೆ ರುಪೇ ಕಾರ್ಡ್ ವಿತರಿಸುವ ಮೂಲಕ ಸಂಸತ್‌ನಲ್ಲಿ ಎತ್ತಲಾದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ ಎಂದು ಮೋದಿ ನುಡಿದರು.

 ಡಿಜಿಟಲ್ ಕರೆನ್ಸಿಯುಗದ ಮೂಲಕ ಪತಿಯೊಬ್ಬನೂ ಪಾರದರ್ಶಕವಾಗಿ ವ್ಯವಹಾರ ಮಾಡಬಹುದಾಗಿದೆ.ಹಿಂದೆ ದೇಶದ ಪ್ರಧಾನಿ ಮಂತ್ರಿಯೊಬ್ಬರು ಹೇಳಿದ್ದಾರೆ ದೆಹಲಿಯಿಂದ ಕಳುಹಿಸಿದ ಹಣ ಬಡವರ ಕೈ ಸೇರುವ ಮೊದಲು ಇತರರ ಪಾಲಾಗುತ್ತದೆ ಎಂದು .ಬಡವರಿಗೆ ದೆಹಲಿಯಿಂದ ನೀಡುವ ಒಂದು ರೂಪಾಯಿಯೂ ಆತನಿಗೆ ನೇರವಾಗಿ ತಲುಪಲು ಡಿಜಿಟಲ್ ವ್ಯವಹಾರ ಸಹಕಾರಿಯಾಗಲಿದೆ ಎಂದವರು ಹೇಳಿ ದರು.

ಪರ್ ಡ್ರಾಫ್ ಮೋರ್ ಕ್ರಾಫ್:

  ದೇಶದಲ್ಲಿ ನೀರಿನ ಬಳಕೆಯ ಬಗ್ಗೆ ಎಚ್ಚರ ವಹಿಸಬೇಕಾಗಿದೆ.ಕಡಿಮೆ ನೀರು ಬಳಸಿ ಹೆಚ್ಚು ಬೆಳೆ ಬೆಳೆಯುವ ಬಗ್ಗೆ ಚಿಂತನೆ ನಡೆಯಬೇಕಾಗಿದೆ.ಅದಕ್ಕಾಗಿ ‘ಪರ್‌ಡ್ರಾಫ್ ಮೋರ್ ಕ್ರಾಫ್’ಅನುಸರಿಸಿ ಎಂದು ಸಂಕಲ್ಪ ಮಾಡಬೇಕಾಗಿದೆ ಎಂದು ಮೋದಿ ತಿಳಿಸಿದರು.ನೀರಿನ ಸಮಸ್ಯೆ,ಪರಿಸರ ಸಮಸ್ಯೆಯ ಬಗ್ಗೆ ಗಮನ ಹರಿಸದೇ ಇದ್ದರೆ ಮುಂದಿನ ಜನಾಂಗಕ್ಕೆ ಅಪತ್ತನ್ನು ನಾವೇ ತಂದೊಡ್ಡಿದಂತಾಗುತ್ತದೆ.ಕರ್ನಾಟಕದಲ್ಲೂ ನೀರಿನ ಸಮಸ್ಯೆ ಎದುರಿಸುತ್ತದೆ. ಭೂಮಿ ತಾಯಿಯನ್ನು, ನಮಗೆ ಶುದ್ಧ ಗಾಳಿಯನ್ನು ಆಕ್ಸಜನನ್ನು ನೀಡುವ ಮರಗಳ ರಕ್ಷಣೆ ಮಾಡದಿದ್ದರೆ.ಜಾಗತಿಕ ತಾಪಮಾನ ಹೆಚ್ಚಳಕ್ಕೆ ಕಾರಣವಾಗುತ್ತದೆ. ಪ್ರಾಕೃತಿಕ ಅಸಮತೋಲನದಿಂದ ಮನುಕುಲಕ್ಕೆ ಅಪಾಯ ಎದುರಾಗಬಹುದು.ಈ ಭೂಮಿ ಇಲ್ಲಿನ ಪರಿಸರ ಪ್ರಾಕೃತಿಕ ಸಂಪತ್ತನ್ನು ಉಳಿಸಿ ಮುಂದಿನ ಪೀಳಿಗೆಗೆ ಒದಗಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಮೋದಿ ತಿಳಿಸಿದರು.

 ಸಾವಯವ ಕೃಷಿಗೆ ಒತ್ತು ನೀಡಿ:

ಭೂಮಿಯನ್ನು ಕೀಟನಾಶಗಳು ಬಳಕೆಯಿಂದ ಹಾನಿಮಾಡುವ ಬದಲು ಸಾವಯವ ಕೃಷಿಗೆ ಒತ್ತು ನೀಡುವ ಬಗ್ಗೆ ಗಮನಹರಿಸಿ.2020ರ ವೇಳೆಗೆ ಈಗ ಬಳಕೆ ಮಾಡುವ ಯೂರಿಯಾವನ್ನು ಶೇ 50ರಷ್ಟು ಕಡಿತ ಮಾಡುವ ನಿರ್ಧಾರ ಕೈ ಗೊಳ್ಳಿ .ಇದರಿಂದ ಭೂಮಿಗೂ ಹಾನಿಯಿಲ್ಲ.ಇಳುವರಿಯೂ ಕಡಿಮೆಯಾಗುವುದಿಲ್ಲ ಎಂದು ಮೋದಿ ಸಲಹೆ ನೀಡಿದರು.

ಸಮುದ್ರದ ತಟದಲ್ಲಿ ಜಲಸಸ್ಯ(ನೀರಿನಲ್ಲಿ ಬೆಳೆಯುವ ಕಳೆ ಗಿಡಗಳು)ದ ಕೃಷಿ ಮಾಡಿ:

ಕರಾವಳಿಯಲ್ಲಿ ಮೀನುಗಾರರ ದೊಡ್ಡ ಸಮುದಾಯವಿದೆ ಇಲ್ಲಿನ ತೀರದಲ್ಲಿ ಜಲಸಸ್ಯಗಳನ್ನು ಬೆಳೆಯುವ ಸಾವಯವ ಕೃಷಿಯನ್ನು ಹಮ್ಮಿಕೊಳ್ಳಬಹುದು.ಗುಜರಾತಿನಲ್ಲಿ ಈ ರೀತಿಯ ಕೃಷಿಯನ್ನು ಮಾಡಲಾಗುತ್ತಿದೆ.ಸರಕಾರದ ಇಲಾಖೆಗಳ ಮುಂದೆ ನಾನು ಈ ಯೋಜನೆಯನ್ನು ಇಟ್ಟಿಲ್ಲ.ಆದರೆ ಸಹಕಾರಿ ಸಂಘಗಳ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರೆ ಆದಾಯವನ್ನು ಪಡೆಯಬಹುದು.ಇದು ಔಷಧೀಯ ಬಳಕೆಗೂ ಉಪಯೋಗವಾಗುವ ಸಸ್ಯಗಳಾಗಿರುವುದರಿಂದ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆಯನ್ನು ಪಡೆಯಬಹುದು.ಸಮುದ್ರದ ತಟದಲ್ಲಿ ಒಂದು ಬುಟ್ಟಿಯಲ್ಲಿ ಈ ಸಸ್ಯಗಳ ಬೇರನ್ನು ಸಂಗ್ರಹಿಸಿ ಬೆಳೆಸಬಹುದು 45 ದಿನಗಳಲ್ಲಿ ಸಸ್ಯ ಬೆಳೆದು ಉಪಯೋಗಕ್ಕೆ ಬರುತ್ತದೆ.ಇದನ್ನು ಕೃಷಿ ಗೊಬ್ಬರವಾಗಿಯೂ ಬಳಸಬಹುದು .ಈ ಯೋಜನೆಯನ್ನು ಕಾರ್ಯಗತ ಗೊಳಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವರು ಮಾರ್ಗದರ್ಶನ ನೀಡಬೇಕು ಎಂದು ಮೋದಿ ಮನವಿ ಮಾಡಿದರು.

ಜೆಮ್ ಪೋರ್ಟಲ್ ಬಳಕೆ:

   ದೇಶದಲ್ಲಿ ಆನ್‌ಲೈನ್ ಮಮಾರಾಟಕ್ಕೆ ಜೆಮ್ ಪೋರ್ಟಲನ್ನು ಆರಂಭಿಸಲಾಗಿದೆ. ದೇಶದ 15 ರಾಜ್ಯಗಳು ಕೇಂದ್ರ ಸರಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ.ಕರ್ನಾಟಕವೂ ಈ ಒಡಂಬಡಿಕೆಗೆ ಸೇರಬೇಕು.ಇದರ ಮೂಲಕ ಸರಕಾರ ತನಗೆ ಬೇಕಾದ ವಸ್ತುಗಳ ಬೇಡಿಕೆಯನ್ನು ಸಲ್ಲಿಸುತ್ತದೆ.ನೋದಣಿ ಮಾಡಿಕೊಂಡ ಉತ್ಫಾದಕರು ವಸ್ತುಗಳನ್ನು ಪೂರೈಕೆ ಮಾಡಬಹುದು.ಇದರಿಂದ ಪಾರದರ್ಶಕ ಮತ್ತು ನೇರ ಮಾರುಕಟ್ಟೆ ವ್ಯವಸ್ಥೆ ಸಾಧ್ಯವಾಗುತ್ತದೆ.ಉತ್ತಮ ಬೆಲೆಯೂ ದೊರೆಯುತ್ತದೆ ಎಂದು ಮೋದಿ ತಿಳಿಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿಶ್ವಕ್ಕೆ ಮಾದರಿ:

ವಿಶ್ವದ ಬೇರೆ ಬೇರೆ ದೇಶಗಳು ಕೌಶಲ್ಯ ವೃದ್ಧಿಗೆ ಒತ್ತು ನೀಡುತ್ತಿವೆ.ಅದರೊಂದಿಗೆ ಉದ್ಯೋಗ ಸೃಷ್ಟಿ,ದೇಶವನ್ನು ಕಟ್ಟುವ ಕೆಲಸ ಮಾಡುತ್ತಿವೆ,ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಈ ಕೆಲಸಗಳು ಬಹಳ ವರ್ಷಗಳ ಹಿಂದಿನಿಂದಲೂ ನಡೆಯುತ್ತಿರುವುದರಿಂದ ಈ ಸಂಸ್ಥೆ ವಿಶ್ವಕ್ಕೆ ಮಾದರಿಯಾಗಿದೆ ಎಂದು ನರೇಂದ್ರ ಮೋದಿ ಶ್ಲಾಘಿಸಿದರು.ಧರ್ಮಸ್ಥಳದವತಿಯಿಂದ ಗ್ರಾಮಾಭಿವೃದ್ಧಿಗಾಗಿ ನಿಸ್ವಾರ್ಥ ನೆಲೆಯಲ್ಲಿ ಬದುಕನ್ನೇ ಸಮರ್ಪಿಸಿಕೊಂಡು ಕೋಟಿ ಕೋಟಿ ಜನರಿಗೆ ಪ್ರೇರಣೆಯಾಗಿರುವ ಹೆಗ್ಗಡೆಯವರಿಗೆ ಹೃತ್ಪೂರ್ವಕ ಕೃತಜ್ಞತೆಯನ್ನು ದೇಶದ ಜನತೆಯ ಪರವಾಗಿ ಸಲ್ಲಿಸುವುದಾಗಿ ಮೋದಿ ನುಡಿದರು.

  ಸಮಾರಂಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧ್ಯಕ್ಷ ಡಿ.ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

 ಸಮಾರಂಭದಲ್ಲಿ ಕೇಂದ್ರ ಅಂಕಿ ಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ.ಸದಾನಂದ ಗೌಡ, ರಾಸಯನಿಕ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರ ಸಚಿವ ಅನಂತ್ ಕುಮಾರ್, ಸಂಸದರಾದ ಬಿ.ಎಸ್.ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲು, ಶಾಸಕ ವಸಂತ ಬಂಗೇರ, ಹೇಮಾವತಿ ಹೆಗ್ಗಡೆ ಮತ್ತಿತರರು ಉಪಸ್ಥತರಿದ್ದರು. ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್ .ಮಂಜುನಾಥ್ ಸ್ವಾಗತಿಸಿದರು. ಡಾ.ಯಶೋ ವರ್ಮಾ ಕಾರ್ಯಕ್ರಮ ನಿರೂಪಿಸಿದರು.

‘‘ನನ್ನ ಪ್ರಿತಿಯ ಬಂಧು ಭಗಿನಿಯರೇ ನಿಮಗೆಲ್ಲಾ ನನ್ನ ನಮಸ್ಕಾರಗಳು.........’’:-

  ‘‘...ನಮೋ ಮಂಜು ನಾಥ..ಧರ್ಮಸ್ಥಳದ ನನ್ನ ಪ್ರಿತಿಯ ಬಂಧು ಭಗಿನಿಯರೇ ನಿಮಗೆಲ್ಲಾ ನನ್ನ ನಮಸ್ಕಾರಗಳು.....ನನ್ನ ಪ್ರೀತಿಯ ಸಹೋದರ ಸಹೋದರಿಯರಿಗೆ ವಿಶೇಷ ಅಭಿನಂದನೆಗಳು...’’ಎಂದು ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲಿ ಕೆಲವು ಸಾಲುಗಳನ್ನು ಹೇಳಿ ತಮ್ಮ ಭಾಷಣ ಆರಂಭಿಸಿದಾಗ ನೆರೆದಿದ್ದ ಮೋದಿ ಅಭಿಮಾನಿಗಳು ಮೋದಿ ಮೋದಿ ಎಂದು ಹರ್ಷೋದ್ಗಾರ ಮಾಡಿದರು.

  ಸಮಾರಂಭದಲ್ಲಿ ನರೇಂದ್ರ ಮೋದಿಯವರನ್ನು ಡಾ.ವೀರೇಂದ್ರ ಹೆಗ್ಗಡೆ ಶಾಲು, ಸ್ಮರಣಿಕೆ ಹಾಗೂ ಪೇಟ ಧರಿಸಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ವೀರೇಂದ್ರ ಹೆಗ್ಗಡೆಯವರನ್ನು ಪ್ರಧಾನಿ ಮೋದಿ ವೇದಿಕೆಯಲ್ಲಿ ಸನ್ಮಾನಿಸಿದರು.

*ಸ್ವಸಹಾಯ ಸಂಘದ ಸದಸ್ಯರಾದ ಶಾಲಿನಿ ಮತ್ತು ಶಕಿಲಾ ಬಾನು ಅವರಿಗೆ ನರೇಂದ್ರ ಮೋದಿ ರೂಪೇ ಕಾರ್ಡ್ ವಿತರಿಸಿದರು.

 ಬಿಗಿ ಬಂದೋಬಸ್ತು :-ನರೇಂದ್ರ ಮೋದಿಯವರು ಹೊಸದಿಲ್ಲಿಯಿಂದ ಬಜ್ಪೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಬಳಿಕ ವಾಯುಪಡೆಯ ವಿಶೇಷ ಹೆಲಿಕಾಪ್ಟರ್ ಮೂಲಕ ಧರ್ಮಸ್ತಳಕ್ಕೆ ಆಗಮಿಸಿದರು.ಧರ್ಮಸ್ಥಳದಿಂದ ಪ್ರಧಾನಿ ಸಂಚಾರಕ್ಕೆ ದೆಹಲಿಯಿಂದಲೇ ತರಿಸಲಾಗಿದ್ದ 3 ಟಾಟಾ ಸಫಾರಿ ಡೈ ಕೋರ್ ಮತ್ತು 1 ಟೊಯೋಟಾ ಕಾರ್ ನೊಂದಿಗೆ 8.ಕಿ.ಮೀ ರಸ್ತೆ ಸಂಚಾರಕ್ಕೆ 60 ಅಧಿಕಾರಿಗಳ ಎಸ್‌ಪಿಜಿ ತಂಡದ ಕಣ್ಗಾವಲಿನೊಂದಿಗೆ ಸಮಾರಂಭದ ವೇದಿಕೆಗೆ ಆಗಮಿಸಿದ್ದರು.ನರೇಂದ್ರ ಮೋದಿ ಧರ್ಮಸ್ಥಳದಲ್ಲಿ ಶ್ರೀ ಕ್ಷೇತ್ರದ ಮಂಜುನಾಥ ಸ್ವಾಮಿ ದೇವರ ದರ್ಶನ ಪಡೆದು,ಶಾಂತಿ ನಿಕೇತನಕ್ಕೆ ಭೇಟಿ ನೀಡಿದ ಬಳಿಕ ಉಜಿರೆಗೆ ಆಗಮಿಸಿ ಸಮಾರಂಭದಲ್ಲಿ 36ನಿಮಿಷಗಳ ಭಾಷಣ ಮಾಡಿದರು.

ಐತಿಹಾಸಿಕ ಭೇಟಿ:

    ಧರ್ಮಸ್ಥಳಕ್ಕೆ ಈ ಹಿಂದೆ ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ 1927 ಮತ್ತು 1980ರಲ್ಲಿ ಭೇಟಿ ನೀಡಿದ್ದರು.ರಾಜೀವ ಗಾಂಧಿ (1991)ರಲ್ಲಿ ಭೇಟಿ ನೀಡಿದ್ದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭೇಟಿ ನೀಡಿದ್ದರು. ಆದರೆ ಪ್ರಧಾನಿ ಹುದ್ದೆಯಲ್ಲಿದ್ದಾಗ ಧರ್ಮಸ್ಥಳಕ್ಕೆ ಭೇಟಿ ನೀಡಿದವರಲ್ಲಿ ನರೇಂದ್ರ ಮೋದಿ ಪ್ರಥಮ ಪ್ರಧಾನಿಯಾಗಿದ್ದಾರೆ.

ಕಾರ್ಯಕ್ರಮದ ಸ್ಥಳದಲ್ಲಿ ಡಿಟೆಕ್ಟರ್‌ಗಳೊಂದಿಗೆ ವಿವಿಧ ಕಡೆ ತಪಾಸಣೆ ನಡೆಸಲಾಗುತಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News