×
Ad

ಪ್ರಧಾನಿ ಮೋದಿಯ ಧರ್ಮಸ್ಥಳ ಭೇಟಿ: ಕೊಲೆ ಆರೋಪಿಗೆ ವಿಐಪಿ ಪಾಸ್!

Update: 2017-10-29 15:13 IST

ಮಂಗಳೂರು, ಅ.29: ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದ ಆರೋಪಿ, ನಮೋ ಬ್ರಿಗೇಡ್‌ ನಾಯಕ ನರೇಶ್ ಶೆಣೈಗೆ ಪ್ರಧಾನಿ ನರೇಂದ್ರ ಮೋದಿಯ ಧರ್ಮಸ್ಥಳ ಭೇಟಿ ಕಾರ್ಯಕ್ರಮಕ್ಕೆ ತೆರಳಲು ವಿಐಪಿ ಪಾಸ್ (ಸಂ: 1843) ನೀಡಲಾಗಿದೆ. ವಿಶೇಷವೆಂದರೆ ಈ ಪಾಸನ್ನು ದ.ಕ.ಜಿಲ್ಲಾ ಎಸ್ಪಿಯವರೇ ನೀಡಿದ್ದಾರೆ ಎನ್ನಲಾಗಿದ್ದು, ವಿವಾದವನ್ನು ಸೃಷ್ಟಿಸಿದೆ.

ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಈ ಪಾಸ್‌ನ ಛಾಯಾಪ್ರತಿಯನ್ನು ಸ್ವತಃ ನರೇಶ್ ಶೆಣೈ ಅಪ್‌ಲೋಡ್ ಮಾಡಿದ್ದು, ಇದೀಗ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿವೆ.

ಕಳೆದ ವರ್ಷದ ಮಾರ್ಚ್ 21ರಂದು ವಿನಾಯಕ ಪಾಂಡುರಂಗ ಬಾಳಿಗಾ ಅವರನ್ನು ಕೊಲೆಗೈಯಲಾಗಿತ್ತು. ಬಾಳಿಗಾ ಮಾಹಿತಿ ಹಕ್ಕು ಕಾರ್ಯಕರ್ತರಾದ ಕಾರಣ ಈ ಕೊಲೆ ಪ್ರಕರಣ ಮಹತ್ವ ಪಡೆದಿತ್ತು. ಈ ಬಗ್ಗೆ ಸಾಮಾಜಿಕ ಹೋರಾಟಗಾರರೂ ಕೂಡ ಧ್ವನಿ ಎತ್ತಿದ್ದರು. ಆರಂಭದಲ್ಲಿ ಈ ಕೊಲೆ ಪ್ರಕರಣದಿಂದ ಬಚಾವ್ ಆಗಲು ಯತ್ನಿಸಿದ್ದ ನಮೋ ಬ್ರಿಗೇಡ್‌ನ ನಾಯಕ ಆಗಿದ್ದ ನರೇಶ್ ಶೆಣೈ ಬಳಿಕ ಜೈಲು ಪಾಲಾಗಿದ್ದ.

ಕೆಲಕಾಲ ಜೈಲಿನಲ್ಲಿದ್ದ ನರೇಶ್ ಶೆಣೈ ಬಳಿಕ ಹೈಕೋರ್ಟ್‌ನಿಂದ ಜಾಮೀನು ಪಡೆದು ಹೊರಗೆ ಬಂದಿದ್ದ. ರವಿವಾರ ಧರ್ಮಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನರೇಶ್ ಶೆಣೈಗೆ ಖುದ್ದು ಜಿಲ್ಲಾ ಎಸ್ಪಿಯೇ ವಿಐಪಿ ಪಾಸ್ ನೀಡಿರುವುದು ಹೊಸ ಚರ್ಚೆಗೆ ನಾಂದಿ ಹಾಡಿದೆ. ಈ ಬಗ್ಗೆ 'ವಾರ್ತಾ ಭಾರತಿ'ಯು ಜಿಲ್ಲಾ ಎಸ್ಪಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದು, ಅವರು ಕರೆ ಸ್ವೀಕರಿಸಿಲ್ಲ.

ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಹೇಳಿಕೆ

ವಿಐಪಿ ಪಾಸ್‌ಗಳನ್ನು ಬಯಸಿ ಕಾರ್ಯಕ್ರಮದ ಆಯೋಜಕರು ಸಲ್ಲಿಸಿರುವ ಪಟ್ಟಿಯಂತೆ ಪಾಸ್‌ಗಳನ್ನು ಒದಗಿಸಿರುವುದಾಗಿ ದ.ಕ. ಜಿಲ್ಲಾ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರ ಧರ್ಮಸ್ಥಳ ಭೇಟಿ ಕಾರ್ಯಕ್ರಮಕ್ಕೆ ತೆರಳಲು ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣದ ಆರೋಪಿ ನರೇಶ್ ಶೆಣೈಗೆ ವಿಐಪಿ ಪಾಸ್ ನೀಡಿರುವ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದರು.

ಯಾರಿಗೆ ಪಾಸ್ ಕೊಡಬೇಕೆಂಬುದು ಕಾರ್ಯಕ್ರಮದ ಆಯೋಜಕರಿಗೆ ಬಿಟ್ಟ ವಿಚಾರ. ಆದರೂ ವಿಐಪಿ ಪಾಸ್‌ಗಳನ್ನು ಬಯಸುವಾಗ ಪಲಿಶೀಲನೆ ನಡೆಸಿಯೇ ಪಟ್ಟಿಯನ್ನು ಸಲ್ಲಿಸುವಂತೆ ನಾವು ಸಂಘಟಕರಿಗೆ ಸೂಚಿಸುತ್ತೇವೆ. ಪರಿಶೀಲನೆ ನಡೆಸಿಯೇ ಪಟ್ಟಿ ಸಲ್ಲಿಸಿದ್ದಾರೆಂದು ನಾವು ಅವರಿಗೆ ವಿಐಪಿ ಪಾಸ್‌ಗಳನ್ನು ಒದಗಿಸಿದ್ದೇವೆ. ಸುಮಾರು 1,500 ವಿಐಪಿ ಪಾಸ್‌ಗಳಿಗೆ ಬೇಡಿಕೆ ಬಂದಿದ್ದವು ಎಂದು ಎಸ್ಪಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News