ಬ್ಲೂ ವೇಲ್ ಆಟದಿಂದ ಮಾನಸಿಕ ಅಸ್ವಸ್ಥನಾಗಿದ್ದ ಯುವಕನ ರಕ್ಷಣೆ
ಮಂಗಳೂರು, ಅ.29: ಬ್ಲೂವೇಲ್ ಆಟದ ಹಿಂದೆ ಬಿದ್ದು, ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಯುವಕನೊಬ್ಬ ಮಂಜೇಶ್ವರ ಪಾವೂರಿನ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನಶ್ಚೇತನ ಕೇಂದ್ರದ ನಿರ್ದೇಶಕ ಜೋಸೆಫ್ ಕ್ರಾಸ್ತಾ ಅವರ ಪ್ರಯತ್ನದಿಂದ ಹೆತ್ತವರ ಮಡಿಲು ಸೇರುವಂತಾಗಿದೆ.
ಅಸ್ಸಾಮಿನ ನಾಗೌನ್ ಜಿಲ್ಲೆಯ ಚೋಕ್‌ಟಾಪ್ ಗ್ರಾಮದ ನೂರುಲ್ ಹಕ್-ಹಲೀಮಾ ಬೇಗಮ್ ದಂಪತಿಯ ಪುತ್ರ ವಾಸಿಂ ಅಕ್ರಂ (22) ರಕ್ಷಿಸಲ್ಪಟ್ಟ ಯುವಕ.
ಸುಮಾರು 5 ತಿಂಗಳ ಹಿಂದೆ ಕೇರಳಕ್ಕೆ ಕೆಲಸ ಅರಸಿಕೊಂಡು ಬಂದಿದ್ದ ವಾಸಿಂ ಅಕ್ರಂ ಕೊಚ್ಚಿಯ ವಿಮಾನ ನಿಲ್ದಾಣ ಸಮೀಪದ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದ. 9ನೆ ತರಗತಿಯವರೆಗೆ ಕಲಿತಿದ್ದ ವಾಸಿಂ ಬ್ಲೂವೇಲ್ ಆಟಕ್ಕೆ ಮರಳಾದ. ಹಾಗೆಯೇ ಮಾನಸಿಕವಾಗಿ ಅಸ್ವಸ್ಥಗೊಂಡು ರೈಲಿನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ.
ಅಕ್ಟೋಬರ್ 2ರಂದು ಪಣಂಬೂರು ಬಳಿ ಅಲೆದಾಡುತ್ತಿದ್ದ ಈತನನ್ನು ವಶಕ್ಕೆ ತೆಗೆದುಕೊಂಡ ಇನ್‌ಸ್ಪೆಕ್ಟರ್ ರಫೀಕ್ ಮಂಜೇಶ್ವರದ ಸ್ನೇಹಾಲಯಕ್ಕೆ ಸೇರಿಸಿದ್ದರು. ಅಲ್ಲಿ ಚಿಕಿತ್ಸೆ ಪಡೆದ ವಾಸಿಂ ಗುಣಮುಖನಾದ. ಅದರಂತೆ ರವಿವಾರ ಮಧ್ಯಾಹ್ನ ವಾಸಿಂನನ್ನು ಹೆತ್ತವರಿಗೆ ಹಸ್ತಾಂತರಿಸಲಾಯಿತು.
"ನೂರುಲ್ ಹಕ್ ಮೂಲತಃ ಪಾಕಿಸ್ತಾನಿ. ಊರಲ್ಲಿ ಚಪ್ಪಲಿ ಅಂಗಡಿ ಹೊಂದಿದ್ದ ಇವರ ಪತ್ನಿ ಹಲೀಮಾ ಬೇಗಮ್ ನರ್ಸ್ ಆಗಿದ್ದಾರೆ. ಈ ದಂಪತಿಗೆ ಇಬ್ಬರು ಗಂಡು ಮತ್ತು ಒಬ್ಬ ಹೆಣ್ಣು ಮಕ್ಕಳು. ಹಿರಿಯವನಾದ ವಾಸಿಂ ಅಕ್ರಂ 9ನೆ ತರಗತಿವರೆಗೆ ಕಲಿತಿದ್ದ. ಬಳಿಕ ಕೆಲಸ ಅರಸಿಕೊಂಡು ಕೇರಳ ಕಡೆಗೆ ಬಂದಿದ್ದ. ಇತರ ಇಬ್ಬರು ಮಕ್ಕಳು ಊರಲ್ಲೇ ಶಾಲೆಗೆ ಹೋಗುತ್ತಿದ್ದಾರೆ. ಊರು ಬಿಟ್ಟು ಬಂದಿದ್ದ ವಾಸಿಂ ಬ್ಲೂವೇಲ್ ಆಟದ ಹಿಂದೆ ಬಿದ್ದಿದ್ದ. ಕೊನೆಗೆ ಆತ್ಮಹತ್ಯೆಗೆ ಯತ್ನಿಸಿ ಪಣಂಬೂರಿನಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದ. ಅ.2ರಂದು ಸ್ನೇಹಾಲಯಕ್ಕೆ ಸೇರಿಸಲ್ಪಟ್ಟ ಈತನಿಗೆ ಸಕಾಲಕ್ಕೆ ಚಿಕಿತ್ಸೆ ನೀಡಿದೆವು. ಗುಣಮುಖವಾಗುತ್ತಲೇ ಹೆತ್ತವರ ಹೆಸರು, ವಿಳಾಸ ಪತ್ತೆ ಹಚ್ಚಿ ಮಾಹಿತಿ ನೀಡಿದೆವು. ಇಂದು ಆತನ ಹೆತ್ತವರು ಇಲ್ಲಿಗೆ ಬಂದಿದ್ದು, ಮಗನನ್ನು ಸ್ವೀಕರಿಸುತ್ತಲೇ ಸಂತುಷ್ಟರಾದರು. ಅವರ ಸಂತಸದ ಕಣ್ಣೀರಿನಿಂದ ನಮ್ಮ ಸೇವೆಯು ಸಾರ್ಥಕವೆನಿಸುತ್ತಿದೆ" ಎಂದು ಸ್ನೇಹಾಲಯದ ನಿರ್ದೇಶಕ ಜೋಸೆಫ್ ಕ್ರಾಸ್ತಾ ಪ್ರತಿಕ್ರಿಯಿಸಿದ್ದಾರೆ.
ವಾಸಿಂ ಸ್ನೇಹಾಲಯ ಸೇರಿದ್ದ ಸಂದರ್ಭ