ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದ ದೇಶ ತುರ್ತು ಪರಿಸ್ಥಿತಿಗೆ ಸಮಾನ
ಉಡುಪಿ, ಅ.29: ದೇಶದಲ್ಲಿ ಯಾವ ಬಟ್ಟೆ ತೊಡಬೇಕು, ಯಾವ ಆಹಾರ ತಿನ್ನಬೇಕು ಎಂಬುದನ್ನು ಬೇರೆಯವರು ನಿರ್ಧರಿಸುತ್ತಾರೆ. ಸಂವಿಧಾನ ಪ್ರತಿ ಯೊಬ್ಬರಿಗೆ ನೀಡಿರುವ ಮಾತನಾಡುವ ಹಕ್ಕನ್ನು ಸತತವಾಗಿ ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ. ಹೀಗೆ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣ ವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ ಇಲ್ಲದ ದೇಶ ತುರ್ತು ಪರಿಸ್ಥಿತಿಗೆ ಸಮಾನ ಎಂದು ಸಿಪಿಐಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಟೀಕಿಸಿದ್ದಾರೆ.
ಉಡುಪಿಯ ಬನ್ನಂಜೆ ನಾರಾಯಣ ಗುರು ಸಭಾಭವನದಲ್ಲಿ ರವಿವಾರ ಆಯೋಜಿಸಲಾದ ಭಾರತ ಕಮ್ಯೂನಿಸ್ಟ್ ಪಕ್ಷ(ಮಾರ್ಕ್ಸ್‌ವಾದಿ)ದ ಉಡುಪಿ ತಾಲೂಕು ಸಮಿತಿಯ 22ನೆ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಮೋದಿ ನೇತೃತ್ವದ ಕೇಂದ್ರ ಸರಕಾರದ ಆರ್ಥಿಕ ನೀತಿಯ ವೈಫಲ್ಯತೆ ವಿರುದ್ಧ ಜನ ಐಕ್ಯ ಹೋರಾಟ ನಡೆಸಬಾರದೆಂಬ ಕಾರಣಕ್ಕೆ ಅವರ ದಿಕ್ಕು ತಪ್ಪಿಸಿ ಹೊಡೆ ಯುವ ಕೆಲಸಕ್ಕಾಗಿ ಈ ದೇಶದಲ್ಲಿ ಕೋಮುವಾದವನ್ನು ಬಿತ್ತಲಾಗುತ್ತಿದೆ. ಹಾಗಾಗಿ ನಾವು ಕೋಮುವಾದವನ್ನು ಮೊದಲು ವಿರೋಧಿಸಬೇಕು ಎಂದು ಅವರು ತಿಳಿಸಿದರು.
ಜಿಎಸ್‌ಟಿಯಿಂದ ಜನಸಾಮಾನ್ಯರ ಮೇಲೆ ತೆರಿಗೆಗಳು ಹೆಚ್ಚಾಗುತ್ತಿವೆ. ಸಣ್ಣ ವ್ಯಾಪರಸ್ಥರು ವ್ಯಾಪರವನ್ನು ಮುಚ್ಚುತ್ತಿದ್ದಾರೆ. ಮೀನು ಹಾಗೂ ಅದನ್ನು ಹಿಡಿ ಯುವ ಸಲಕರಣೆಗಳ ಮೇಲೂ ತೆರಿಗೆ ವಿಧಿಸಿ ಮೀನುಗಾರರ ಬದುಕಿಗೆ ಬರೆ ಎಳೆಯಲಾಗಿದೆ. ಅದೇ ರೀತಿ ರಾಜ್ಯ ಸರಕಾರದ ತೆರಿಗೆ ಸಂಗ್ರಹಿಸುವ ಹಕ್ಕನ್ನು ಕೂಡ ಕಸಿದುಕೊಳ್ಳಲಾಗಿದೆ. ಜಿಎಸ್‌ಟಿ ಹಾಗೂ ನೋಟು ರದ್ಧತಿಯಿಂದ ಜನ ಸಾಮಾನ್ಯರಿಗೆ ಅನುಕೂಲಕ್ಕಿಂತ ಅನಾನುಕೂಲಗಳೇ ಹೆಚ್ಚಾಗಿದೆ ಎಂದರು.
ದೇಶದಲ್ಲಿ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಏರಿಕೆಯಾಗಿದ್ದು, ಜಗತ್ತಿನ 120 ದೇಶಗಳ ಪಟ್ಟಿಯಲ್ಲಿ 97 ಸ್ಥಾನದಲ್ಲಿದ್ದ ಭಾರತ ಈಗ 100ನೆ ಸ್ಥಾನಕ್ಕೆ ಬಂದಿದೆ. ಭಾರತದಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವವ ಸಂಖ್ಯೆ ಶೇ.19.7 ರಿಂದ ಶೇ.20ಕ್ಕೆ ಹೆಚ್ಚಾಗಿದ್ದು, ಇವರಲ್ಲಿ 9.7ಕೋಟಿ ಮಕ್ಕಳಿದ್ದಾರೆ. ಶೇ.58 ಬಾಲಕಿಯರು ಹಾಗೂ ಶೇ.50 ಬಾಲಕರು ಅಪೌಷ್ಠಿಕತೆಯಿಂದ ಬಳಲುತ್ತಿರುವು ದಾಗಿ ವೈದ್ಯಕೀಯ ವರದಿ ತಿಳಿಸಿದೆ ಎಂದು ಅವರು ಹೇಳಿದರು.
ರೈತರ ಸಾಲ ಮನ್ನ ಮಾಡಲು ಆಗದವರು ದೇಶದ 500 ಕಾರ್ಪೊರೇಟ್ ಕಂಪೆನಿಗಳ 86ಸಾವಿರ ಕೋಟಿ ರೂ. ಮನ್ನಾ ಮಾಡಿದ್ದಾರೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಠಿ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಮೋದಿ ಸರಕಾರ ಕಳೆದ ಮೂರು ವರ್ಷಗಳಲ್ಲಿ 1-3ಲಕ್ಷ ಉದ್ಯೋಗವನ್ನು ಸೃಷ್ಠಿ ಮಾಡಿದೆ. ಅಂದರೆ ಇವರು ನೀಡಿದ ಭರವಸೆಯ ಶೇ.0.5ರಷ್ಟು ಮಾತ್ರ ಉದ್ಯೋಗ ಸೃಷ್ಠಿಯಾಗಿದೆ. ನೋಟು ರದ್ಧತಿ ಮತ್ತು ಜಿಎಸ್‌ಟಿಯು ದೇಶದ ಬಹುದೊಡ್ಡ ಹಗರಣ ಎಂದು ಅವರು ಆರೋಪಿಸಿದರು.
ಕೇರಳದಲ್ಲಿ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿಯು 14 ದಿನಗಳ ಕಾಲ ಸಿಪಿಎಂ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಸಿತು. ಆದರೆ ನಿಜವಾಗಿ ಇದು ಬಿಜೆಪಿಯ ಆರ್ಥಿಕ ಧೋರಣೆಯಾದ ನೋಟು ರದ್ಧತಿ ಹಾಗೂ ಜಿಎಸ್‌ಟಿಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿರುವ ಸಿಪಿಎಂ ಪಕ್ಷವನ್ನು ಬಾಯಿ ಮುಚ್ಚಿಸುವ ಪ್ರಯತ್ನವೇ ಹೊರತು ಕೊಲೆಯಲ್ಲ. ಇದು ಕೇವಲ ನೆಪ ಮಾತ್ರ ಎಂದು ಅವರು ದೂರಿದರು.
ಸಿಪಿಎಂ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ಕೆ.ಶಂಕರ್, ಮುಖಂಡ ವಿಶ್ವನಾಥ ರೈ ಮಾತನಾಡಿದರು. ಜಿಲ್ಲಾ ಸಮಿತಿ ಸದಸ್ಯರಾದ ವೆಂಕಟೇಶ್ ಕೋಣಿ, ಉಮೇಶ್ ಕುಂದರ್ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಸಿಪಿಎಂ ಸಮಿತಿ ಸದಸ್ಯ ಕೆ.ಲಕ್ಷ್ಮಣ್ ವಹಿಸಿದ್ದರು. ತಾಲೂಕು ಸಮಿತಿ ಕಾರ್ಯದರ್ಶಿ ವಿಠಲ ಪೂಜಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.