ಉಚಿತ ಮೂಳೆ ಸಾಂದ್ರತಾ ತಪಾಸಣಾ ಶಿಬಿರ
ಉಡುಪಿ, ಅ.29: ಪರ್ಯಾಯ ಪೇಜಾವರ ಮಠದ ಆಶ್ರಯದಲ್ಲಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಕುಂಜಿಬೆಟ್ಟು ಸುನಾಗ್ ಅರ್ಥೋ ಕೇರ್ ಸೆಂಟರ್ ಹಾಗೂ ಔಷಧ ವಿತರಕರ ಸಹಕಾರದೊಂದಿಗೆ ಸಾರ್ವಜನಿಕ ಉಚಿತ ಮೂಳೆ ಸಾಂದ್ರತಾ ತಪಾಸಣಾ ಶಿಬಿರವನ್ನು ಶ್ರೀಕೃಷ್ಣ ಮಠದ ಅನ್ನಬ್ರಹ್ಮ ಛತ್ರದಲ್ಲಿ ರವಿವಾರ ಆಯೋಜಿಸಲಾಗಿತ್ತು.
ಶಿಬಿರವನ್ನು ಉದ್ಘಾಟಿಸಿದ ಪರ್ಯಾಯ ಪೇಜಾವರ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಆರೋಗ್ಯ ಮನುಷ್ಯನ ದೊಡ್ಡ ಸಂಪತ್ತು. ಆರೋಗ್ಯ ಸರಿಯಾಗಿದ್ದರೆ ಮಾತ್ರ ಉತ್ತಮ ಸಾಧನೆಯನ್ನು ಮಾಡಲು ಸಾಧ್ಯ. ಇಂತಹ ಶಿಬಿರದಿಂದ ರೋಗದ ಲಕ್ಷಣಗಳಿದ್ದರೆ ತಪಾಸಣೆ ಮಾಡಿ ಸೂಕ್ತ ಚಿಕಿತ್ಸೆ ಪಡೆಯ ಬಹುದು. ಇದು ಜನ ಸೇವೆಯಿಂದ ಜನಾದನರ್ ಸೇವೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ.ನರೇಂದ್ರ ಕುಮಾರ್, ಡಾ.ವೀಣಾ ನರೇಂದ್ರ, ಡಾ. ಶಿವಶಂಕರ್, ಡಾ.ಪ್ರಸನ್ನ ಕೆ.ಎಸ್., ಡಾ.ರವಿಚಂದ್ರ ಉಚ್ಚಿಲ, ಡಾ.ಜಯಂತ್, ಡಾ.ಅರ್ಚನಾ, ಡಾ.ಸತೀಶ್, ಕರ್ನಾಟಕ ಮೆಡಿಕಲ್ ರೆಪ್ರಸೆಂಟೇಶನ್‌ನ ಕಾರ್ಯದರ್ಶಿ ಶ್ರೀನಾಥ್, ಪರಿಷತ್ತಿನ ಅಧ್ಯಕ್ಷ ವಿಷ್ಣು ಪ್ರಸಾದ್ ಪಾಡಿಗಾರ್ ಉಪಸ್ಥಿತರಿದ್ದರು.
ಪರಿಷತ್ತಿನ ವಿಷ್ಣು ಪ್ರಸಾದ್ ಪಾಡಿಗಾರ್ ಸ್ವಾಗತಿಸಿದರು. ಕೋಶಾಧಿಕಾರಿ ಕುಮಾರಸ್ವಾಮಿ ಉಡುಪ ವಂದಿಸಿದರು. ಕಾರ್ಯದರ್ಶಿ ಪ್ರವೀಣ್ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು.