ಕಟಪಾಡಿ ಜಂಕ್ಷನ್ ಸಮಸ್ಯೆ ಪರಿಹಾರಕ್ಕೆ ಸಚಿವರಿಗೆ ಮನವಿ: ಗೀತಾಂಜಲಿ
ಉಡುಪಿ, ಅ.29: ಕಟಪಾಡಿ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ 66ರ ಕಾಮ ಗಾರಿಯ ಡಿಪಿಆರ್ ಬದಲಿಸಿರುವುದರಿಂದ ಇದೀಗ ಸಾಕಷ್ಟು ಸಮಸ್ಯೆಗಳು ಎದುರಾಗಿದ್ದು, ಈ ಬಗ್ಗೆ ಸಂಸದರ ಮೂಲಕ ಹೆದ್ದಾರಿ ಸಚಿವರ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ ತಿಳಿಸಿದ್ದಾರೆ.
ಕಟಪಾಡಿಯಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಓಲೈಕೆಗಾಗಿ ಆಗಿನ ಹೆದ್ದಾರಿ ಸಚಿವ ಆಸ್ಕರ್ ಫೆೆರ್ನಾಂಡೀಸ್ ಕಟಪಾಡಿಯ ಡಿಪಿಆರ್ ಬದಲಿಸಿದ್ದು, ಇದರಿಂದ ಇಲ್ಲಿ ಅಂಡರ್ ಪಾಸ್ ನಿರ್ಮಾಣ ಕೈಬಿಟ್ಟು ಹೋಗಿರುವುದರಿಂದ ಸಮ್ಯೆ ಉದ್ಭವಿಸಿದೆ ಎಂದು ಆರೋಪಿಸಿದರು.
ಇಲ್ಲಿನ ಬಾಡಿಗೆ ವಾಹನ ಚಾಲಕರಿಗೆ ಯಾವುದೇ ಬದಲಿ ವ್ಯವಸ್ಥೆ ಮಾಡಿಲ್ಲ. ಹೂವಿನ ವ್ಯಾಪಾರಿಗಳ ಸ್ಥಳಾಂತರ ಮಾಡುವಲ್ಲಿ ಗ್ರಾಪಂ ವಿಫಲವಾಗಿದೆ. ಸರ್ವಿಸ್ ರಸ್ತೆ ಸಮಸ್ಯೆಯನ್ನು ಪರಿಹರಿಸಲು ಜಿಲ್ಲಾಧಿಕಾರಿ ಹಾಗೂ ಎಸ್ಪಿ ಅವರ ಸಭೆಯನ್ನು ಕರೆಯಬೇಕು. ಜಿಲ್ಲಾಧಿಕಾರಿಗಳ ಮೂಲಕ ಇಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಬಿಜೆಪಿ ವಕ್ತಾರ ಶಂಕರ ಪೂಜಾರಿ, ಕಟಪಾಡಿ ಬಿಜೆಪಿ ಸ್ಥಾನೀಯ ಸಮಿತಿಯ ಅಧ್ಯಕ್ಷ ಕಮಲಾಕ್ಷ ಸುವರ್ಣ, ತಾಪಂ ಸದಸ್ಯ ನಾಗೇಶ್ ಪೂಜಾರಿ, ಗ್ರಾಪಂ ಸದಸ್ಯರಾದ ವೀಣಾ ಶೆಟ್ಟಿ, ಪವಿತ್ರಾ ಶೆಟ್ಟಿ, ಕುರ್ಕಾಲು ಶಕ್ತಿ ಕೇಂದ್ರದ ಅಧ್ಯಕ್ಷ ಗೋಪಾಲಕೃಷ್ಣ ರಾವ್ ಉಪಸ್ಥಿತರಿದ್ದರು.