ರಾಜಕೀಯ ಕಾರಣಕ್ಕೆ ಬಿಜೆಪಿಯಿಂದ ಟಿಪ್ಪು ವಿವಾದ: ಕಲ್ಲಾಗರ್
ಕುಂದಾಪುರ, ಅ.29: ಜನರ ದಾರಿ ತಪ್ಪಿಸಲು ಧರ್ಮದ ಆಧಾರದಲ್ಲಿ ಜನರನ್ನು ಒಡೆಯುವ ಕೆಲಸ ಬಿಜೆಪಿ ಮಾಡುತ್ತಿದೆ. ಟಿಪ್ಪುವಿನ ಬಗ್ಗೆ ಸುಳ್ಳು ವಿಷಯಗಳನ್ನು ಬಿತ್ತರಿಸಿ ರಾಜಕೀಯ ಮೈಲೇಜ್ ಗಿಟ್ಟಿಸಿಕೊಳ್ಳುವ ಹೀನಾಯ ಸ್ಥಿತಿ ಬಿಜೆಪಿಗೆ ಬಂದಿದೆ ಎಂದು ಸಿಪಿಐಎಂ ಬೈಂದೂರು ವಲಯ ಕಾರ್ಯ ದರ್ಶಿ ಸುರೇಶ್ ಕಲ್ಲಾಗರ ಟೀಕಿಸಿದ್ದಾರೆ.
ಹೆಮ್ಮಾಡಿ ಆದರ್ಶ ಯುವಕ ಮಂಡಲದಲ್ಲಿ ಇತ್ತೀಚೆಗೆ ಸಿಪಿಐಎಂ ಹೆಮ್ಮಾಡಿ ಶಾಖೆಯ ಪ್ರಥಮ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯ, ವಸತಿ, ಊಟ, ಕಾರ್ಮಿಕರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಿ ಕೊಡಿ ಎಂದು ಹೋರಾಟ ಮಾಡಿದರೆ ದೇಶದ್ರೋಹಿಗಳು ಎಂಬುದಾಗಿ ಬಿಂಬಿಸಲಾಗುತ್ತಿದೆಂದು ಅವರು ದೂರಿದರು.
ಬಣ್ಣದ ಮಾತುಗಳನ್ನಾಡಿ ಕೇಂದ್ರದಲ್ಲಿ ಅಧಿಕಾರ ಗಿಟ್ಟಿಸಿಕೊಂಡ ಮೋದಿ ನೇತೃತ್ವದ ಕೇಂದ್ರ ಸರಕಾರ ತನ್ನ ಆಡಳಿತದಲ್ಲಿ ಸಂಪೂರ್ಣ ವಿಫಲತೆಯನ್ನು ಕಂಡುಕೊಳ್ಳುತ್ತಿದೆ. ಇವರ ವೈಫಲ್ಯಗಳ ಕುರಿತು ಸಿಪಿಎಂ ಜನಸಾಮಾನ್ಯರಿಗೆ ಮನದಟ್ಟು ಮಾಡಿ, ದೇಶಾದ್ಯಂತ ಆಳುವವರ, ಬಂಡವಾಳಶಾಹಿಗಳ ವಿರುದ್ದ ಹೋರಾಟ ನಡೆಸುತ್ತಿದೆ. ಹೀಗಾಗಿ ಸಿಪಿಎಂ ಅಂದರೆ ಬಿಜೆಪಿ, ಸಂಘಪರಿವಾರಕ್ಕೆ ನಡುಕ ಎಂದರು.
ಅಧ್ಯಕ್ಷತೆಯನ್ನು ಮುಖಂಡ ರಾಮ ಕುಲಾಲ್ ವಹಿಸಿದ್ದರು. ಸಿಪಿಐಎಂ ಬೈಂದೂರು ವಲಯ ಸಮಿತಿ ಸದಸ್ಯ ಸಂತೋಷ ಹೆಮ್ಮಾಡಿ, ಹೆಮ್ಮಾಡಿ ಶಾಖಾ ಮುಖಂಡ ಪ್ರಕಾಶ ಉಪಸ್ಥಿತರಿದ್ದರು. ಸಮ್ಮೇಳನದಲ್ಲಿ ಶಾಖಾ ಕಾರ್ಯದರ್ಶಿ ಯಾಗಿ ಜಗದೀಶ ಆಚಾರ್ ಹರೆಗೋಡು ಪುನರಾಯ್ಕೆಯಾದರು.