×
Ad

ಬೆಳ್ತಂಗಡಿ ಸಮೀಪ ರಸ್ತೆ ಅಪಘಾತ: ಇಬ್ಬರು ಸ್ಥಳದಲ್ಲೇ ಮೃತ್ಯು

Update: 2017-10-29 18:41 IST

ಬೆಳ್ತಂಗಡಿ, ಅ. 29: ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಗರ್ಡಾಡಿ ಸನಿಹದ ಪಂಜಿನಡಾಯಿ ಎಂಬಲ್ಲಿ ಎರಡು ಕಾರುಗಳು ನಡೆದ ಮುಖಾಮುಖಿ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರ ಗಾಯಗೊಂಡ ಘಟನೆ ರವಿವಾರ ಸಂಜೆ ನಡೆದಿದೆ.

ಗುರುವಾಯನಕರೆ ಸನಿಹದ ವರಕಬೆ ನಿವಾಸಿಗಳಾದ ಆಶಿತ್ ಯಾನೆ ಅಚ್ಚು (21) ಹಾಗೂ ವಿಶ್ವಾಸ್ (19) ಮೃತರು ಎಂದು ಗುರುತಿಸಲಾಗಿದೆ. ಇವರಿಬ್ಬರ ಜೊತೆ ಇದ್ದ ದೀಪಕ್ (19) ವಿಕಾಸ್ (21) ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇನ್ನೊಂದು ಕಾರಿನಲ್ಲಿದ್ದ ಬೀರೂರು ಪುರಸಭೆಯ ಅಧ್ಯಕ್ಷೆ ನಿರ್ಮಲಾ (34), ಉಪಾಧ್ಯಕ್ಷೆ ಸವಿತಾ (32), ಸುರೇಶ್ (42), ಹಾಗೂ ಚಾಲಕ ಜಗನ್ನಾಥ್ (52) ಪ್ರಯಾಣಿಸುತ್ತಿದ್ದು ಅಪಘಾತದಲ್ಲಿ ಅವರು ಗಂಭೀರ ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದಾರೆ. ನಿರ್ಮಲಾ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುರುವಾಯನಕೆರೆಯಿಂದ ವೇಣೂರು ಕಡೆಗೆ ವರಕಬೆಯವರ ಕಾರು ಹಾಗೂ ಮೂಡುಬಿದಿರೆ ಕಡೆಯಿಂದ ಬೀರೂರಿನ ಕಡೆಯವರ ಕಾರು ಪರಸ್ಪರ ಢಿಕ್ಕಿ ಯಾಗಿದೆ. ಎರಡು ಕಾರುಗಳು ನಜ್ಜುಗುಜ್ಜಾಗಿವೆ. ಗುರುವಾಯನಕೆರೆಯ ಇಬ್ಬರು ನಿವಾಸಿಗಳು  ಸ್ಥಳದಲ್ಲೆ ಮೃತಪಟ್ಟಿದ್ದು, ಒಟ್ಟು 7 ಮಂದಿ ಗಾಯ ಗೊಂಡಿದ್ದಾರೆ.

ಬೀರೂರಿನವರು ಧರ್ಮಸ್ಥಳಕ್ಕೆ ಬಂದು ಬಳಿಕ ಮೂಡಬಿದರೆಯ ಕಾಲೇಜೊಂದಕ್ಕೆ ಹೋಗಿದ್ದು, ಮರಳಿ ಬೀರೂರು ಕಡೆ ಹೊರಟಿದ್ದರು. ಆದರೆ ಗರ್ಡಾಡಿಯಲ್ಲಿ ಎದುರಿನಿಂದ ಬಂದ ಇನ್ನೊಂದು ಕಾರು ಢಿಕ್ಕಿ ಹೊಡೆಯಿತು. ಬೆಳ್ತಂಗಡಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News