×
Ad

ಮುಂದಿನ 5 ವರ್ಷಗಳಲ್ಲಿ ರೈಲ್ವೆಯಿಂದ 150 ಬಿ.ಡಾ. ಹೂಡಿಕೆ,ದಶಲಕ್ಷ ಉದ್ಯೋಗಗಳ ಸೃಷ್ಟಿ: ಗೋಯಲ್

Update: 2017-10-29 19:18 IST

ಮುಂಬೈ,ಅ.29: ಮುಂದಿನ ಐದು ವರ್ಷಗಳಲ್ಲಿ 150 ಬಿ.ಡಾಲರ್‌ಗೂ ಅಧಿಕ ಹೂಡಿಕೆಯ ಬಗ್ಗೆ ರೈಲ್ವೆಯು ಪರಿಶೀಲಿಸುತ್ತಿದ್ದು, ಇದು ಹತ್ತು ಲಕ್ಷ ಹೆಚ್ಚುವರಿ ಉದ್ಯೋಗ ಗಳ ಸೃಷ್ಟಿಗೆ ನೆರವಾಗಲಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಕಳೆದ ರಾತ್ರಿ ಇಲ್ಲಿ ಏರ್ಪಡಿಸಲಾಗಿದ್ದ ಇಕನಾಮಿಕ್ ಟೈಮ್ಸ್‌ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಭಾರತೀಯ ರೈಲ್ವೆಗೆ ಹೊಸ ದಿಕ್ಕೊಂದನ್ನು ನೀಡಲು ತಾನು ಪ್ರಯತ್ನಿಸುತ್ತಿರುವುದಾಗಿ ಹೇಳಿದರು.

 ಸುರಕ್ಷಿತ, ಸುಭದ್ರ ಮತ್ತು ಅನುಕೂಲಕರ ಪ್ರಯಾಣ ಸೌಲಭ್ಯವನ್ನು ಒದಗಿಸುವ ಸರಕಾರದ ಅಜೆಂಡಾವನ್ನು ಕಾರ್ಯಗತಗೊಳಿಸುವಲ್ಲಿ ರೈಲ್ವೆಯು ಪ್ರಮುಖ ಪಾತ್ರವನ್ನು ವಹಿಸಬಲ್ಲುದು ಎಂದ ಅವರು, ಮೂಲಸೌಕರ್ಯದತ್ತ ಗಮನ ಹರಿಸುವುದರಿಂದ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಲು ನೆರವಾಗುತ್ತದೆ ಎಂದರು.

ರೈಲು ಮಾರ್ಗಗಳ ಸಂಪೂರ್ಣ ವಿದ್ಯುದೀಕರಣ ಕಾರ್ಯವನ್ನು ನಿಗದಿತ 10 ವರ್ಷಗಳ ಬದಲು ನಾಲ್ಕು ವರ್ಷಗಳಲ್ಲಿ ಪೂರ್ಣಗೊಳಿಸಲು ತನ್ನ ಸಚಿವಾಲಯವು ಉದ್ದೇಶಿಸಿದ್ದು, ಇದು ಈಗಾಗಲೇ ನಷ್ಟದಲ್ಲಿರುವ ರೈಲ್ವೆಯ ವೆಚ್ಚವನ್ನು ಶೇ.30ರಷ್ಟು ತಗ್ಗಿಸಲು ನೆರವಾಗುತ್ತದೆ ಎಂದ ಗೋಯಲ್, ವಿದ್ಯುದೀಕರಣದಿಂದಾಗಿ ರೈಲ್ವೆಗೆ ವಾರ್ಷಿಕ 10,000 ಕೋ.ರೂ.ಗಳ ಇಂಧನ ವೆಚ್ಚವು ಉಳಿತಾಯವಾಗಲಿದೆ ಎಂದರು.2015ರಲ್ಲಿ ಅಂದಿನ ರೈಲ್ವೆ ಸಚಿವ ಸುರೇಶ ಪ್ರಭು ಅವರು ಮುಂದಿನ ಐದು ವರ್ಷ ಗಳಲ್ಲಿ ರೈಲ್ವೆಗೆ 8.5 ಲ.ಕೋ.ರೂ.ಹೂಡಿಕೆಗಳ ಅಗತ್ಯವಿದೆ ಮತ್ತು ಇದಕ್ಕಾಗಿ ಸಾಗರೋತ್ತರ ಹೂಡಿಕೆದಾರರನ್ನು ಆಹ್ವಾನಿಸಲಾಗಿದೆ ಎಂದು ಹೇಳಿದ್ದರು. ಗೋಯಲ್‌ರ 150 ಶತಕೋಟಿ ಡಾಲರ್ ಪ್ರಭು ಅವರ 8.5ಲ.ಕೋ.ರೂ.ಹೂಡಿಕೆಯ ಭಾಗವಾಗಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News