‘ವಿದ್ಯಾಸಿರಿ ಯೋಜನೆಯಲ್ಲಿ ಮುಸ್ಲಿಮ್, ಜೈನ ವಿದ್ಯಾರ್ಥಿಗಳಿಗೆ ಅನ್ಯಾಯ’
ಉಡುಪಿ, ಅ.29: 2016-17ನೆ ಸಾಲಿನ ಜಿಲ್ಲೆಯ ಅಲ್ಪಸಂಖ್ಯಾತರ ವಿದ್ಯಾಸಿರಿ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದ ಮುಸ್ಲಿಮ್ ಮತ್ತು ಜೈನ ಸಮುದಾಯದ ಅರ್ಹ ವಿದ್ಯಾರ್ಥಿಗಳಿಗೆ ಅನುದಾನ ಬಿಡುಗಡೆಗೊಳಿಸದೆ ಅನ್ಯಾಯ ಮಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಉಡುಪಿ ಜಿಲ್ಲಾ ಶಂಸುಲ್ ಉಲಮಾ ಅಕಾಡಮಿ ಪ್ರಧಾನ ಕಾರ್ಯದರ್ಶಿ ಎಂ.ಪಿ. ಮೊಯ್ದಿನಬ್ಬ ಆರೋಪಿಸಿದ್ದಾರೆ.
ಈ ಬಗ್ಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಸಚಿವ ತನ್ವೀರ್ ಸೇಠ್, ರಾಜ್ಯಸಭಾ ಸದಸ್ಯ ಆಸ್ಕರ್ ಪೆರ್ನಾಂಡೀಸ್, ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಶಾಸಕರಾದ ಗೋಪಾಲ ಪೂಜಾರಿ, ವಿನಯ ಕುಮಾರ್ ಸೊರಕೆ, ವಿಧಾನಪರಿಷತ್ ಸದಸ್ಯ ಕೆ. ಪ್ರತಾಪ್‌ಚಂದ್ರ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿರುವ ಮೊಯ್ದಿನಬ್ಬ, ಮುಸ್ಲಿಮ್ ವಿದ್ಯಾರ್ಥಿಗಳ ಒಟ್ಟು 1073 ಅರ್ಜಿಗಳಲ್ಲಿ ಕೇವಲ 121 ಅರ್ಜಿಗಳು ಮಾತ್ರ ಮಂಜೂರಾಗಿವೆ. 1152 ಕ್ರಿಶ್ಚಿಯನ್ ವಿದ್ಯಾರ್ಥಿಗಳ ಅರ್ಜಿಗಳಲ್ಲಿ ಎಲ್ಲ 1152 ಅರ್ಜಿಗಳು, ಜೈನ ವಿದ್ಯಾರ್ಥಿಗಳ 130 ಅರ್ಜಿಗಳಲ್ಲಿ 120 ಅರ್ಜಿಗಳು ಮಂಜೂರಾಗಿವೆ ಎಂದು ತಿಳಿಸಿದ್ದಾರೆ.
ಸಮುದಾಯದ ವಿದ್ಯಾರ್ಥಿಗಳಿಗೆ ಸರಕಾರ ಈ ಯೋಜನೆ ಯನ್ನು ಜಾರಿಗೆ ತಂದಿದ್ದರೂ ಅದನ್ನು ಸಮರ್ಪಕವಾಗಿ ಮುಸ್ಲಿಮ್, ಜೈನ ಸಮುದಾಯದ ವಿದ್ಯಾರ್ಥಿಗಳಿಗೆ ದೊರಕಿಸಿಕೊಡುವಲ್ಲಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಕೇಂದ್ರ ಕಚೇರಿಯು ಸಂಪೂರ್ಣ ವಿಫಲವಾಗಿದೆ. ಇದು ಈ ಸಮುದಾಯದ ವಿದ್ಯಾರ್ಥಿಗಳಿಗೆ ಮಾಡಿದ ಘೋರ ಅನ್ಯಾಯ ಎಂದು ಅವರು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಆದುದರಿಂದ ಈ ಗಂಭೀರ ಲೋಪದ ಬಗ್ಗೆ ಕೂಡಲೇ ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕು ಮತ್ತು ವಂಚಿತರಾದ ಮುಸ್ಲಿಮ್ ಮತ್ತು ಜೈನ ಸಮು ದಾಯದ ವಿದ್ಯಾರ್ಥಿಗಳಿಗೆ ಅವಶ್ಯ ಇರುವ ಅನುದಾನವನ್ನು ಬಿಡುಗಡೆಗೊಳಿಸ ಬೇಕು ಎಂದು ಎಂ.ಪಿ.ಮೊಯ್ದಿನಬ್ಬ ಒತ್ತಾಯಿಸಿದ್ದಾರೆ.