ನಿಮಗೆ ಕಾಶ್ಮೀರಿಗಳ ಹೃದಯಗಳನ್ನು ಗೆಲ್ಲಬೇಕೆಂದಿದ್ದರೆ ರಾಜ್ಯದ ಸ್ವಾಯತ್ತತೆಯನ್ನು ಮರಳಿಸಿ: ಫಾರೂಕ್ ಅಬ್ದುಲ್ಲಾ

Update: 2017-10-29 16:34 GMT

ಶ್ರೀನಗರ,ಅ.29: ಕಾಶ್ಮೀರಿಗಳ ಹೃದಯಗಳನ್ನು ಗೆಲ್ಲಬೇಕೆಂದು ಕೇಂದ್ರವು ಬಯಸಿದ್ದರೆ ಅದು ರಾಜ್ಯದ ಸ್ವಾಯತ್ತತೆಯನ್ನು ಮರುಸ್ಥಾಪಿಸಬೇಕು ಎಂದು ಪ್ರತಿಪಕ್ಷ ನ್ಯಾಷನಲ್ ಕಾನ್‌ಫರೆನ್ಸ್(ಎನ್‌ಸಿ)ನ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರು ರವಿವಾರ ಇಲ್ಲಿ ಹೇಳಿದರು.

15 ವರ್ಷಗಳ ವಿರಾಮದ ಬಳಿಕ ಶೇರ್-ಎ-ಕಾಶ್ಮೀರ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ತನ್ನ ಪಕ್ಷದ ಪ್ರತಿನಿಧಿಗಳ ಅಧಿವೇಶನದಲ್ಲಿ ಮಾತನಾಡಿದ ಅವರು, ನಾವಿಂದು ಕಾಶ್ಮೀರ ವಿಲೀನದ ಷರತ್ತುಗಳು ಮತ್ತು ಸ್ವಾಯತ್ತೆಯ ಬಗ್ಗೆ ಮಾತನಾಡಿದರೆ ನಮ್ಮನ್ನು ದೇಶದ್ರೋಹಿಗಳು ಮತ್ತು ದೇಶವಿರೋಧಿಗಳೆಂದು ಕರೆಯಲಾಗುತ್ತಿದೆ. ಇದು ನಮ್ಮ ನಿಷ್ಠೆಗೆ ಸಲ್ಲುತ್ತಿರುವ ಉಡುಗೊರೆಯೇ? ನಾವು ಪ್ರೀತಿಯಿಂದಲೇ ನಿಮ್ಮಲ್ಲಿ(ಭಾರತ) ವಿಲೀನ ಗೊಂಡಿದ್ದೆವು, ಆದರೆ ನೀವು ನಮ್ಮ ಪ್ರೀತಿಯನ್ನು ಅರ್ಥ ಮಾಡಿಕೊಳ್ಳಲಿಲ್ಲ ಮತ್ತು ನಮ್ಮಲ್ಲಿದ್ದ ಎಲ್ಲವನ್ನೂ ಕಿತ್ತುಕೊಂಡಿರಿ. ಮತ್ತು ನಾವು ನಿಮ್ಮನ್ನೇಕೆ ಅಪ್ಪಿಕೊಳ್ಳುತ್ತಿಲ್ಲ ಎಂದು ಪ್ರಶ್ನಿಸುತ್ತೀದ್ದೀರಿ ಎಂದು ಹೇಳಿದರು.

ನೀವು ಜನತೆಯ ಹೃದಯಗಳನ್ನು ಗೆಲ್ಲಲು ಪ್ರಯತ್ನಿಸುವವರೆಗೆ ಜಮ್ಮು, ಕಾಶ್ಮೀರ ಮತ್ತು ಲಡಾಖ್ ನಿಮ್ಮನ್ನು ಅಪ್ಪಿಕೊಳ್ಳುವುದಿಲ್ಲ ಎನ್ನುವುದನ್ನು ಮರೆಯಬೇಡಿ. ನಮ್ಮ ಹೃದಯಗಳನ್ನು ಗೆಲ್ಲಲು ಬಯಸಿದ್ದರೆ ನಮ್ಮ ಸ್ವಾಯತ್ತತೆಯನ್ನು ನಮಗೆ ಮರಳಿಸಿ ಎಂದರು.

 ಜಮ್ಮು-ಕಾಶ್ಮೀರದಲ್ಲಿ ಸ್ವಾಯತ್ತತೆಯನ್ನು ನೀಡಬಹುದಾದ ಪ್ರದೇಶಗಳನ್ನು ಕೇಂದ್ರವು ಪರಿಗಣಿಸಬೇಕು ಎಂದು ಮಾಜಿ ಕೇಂದ್ರ ಗೃಹಸಚಿವ ಪಿ.ಚಿದಂಬರಂ ಸರಿಯಾಗಿಯೇ ಹೇಳಿದ್ದಾರೆ ಎಂದು ಫಾರೂಕ್ ಹೊಗಳಿದರಾದರೂ, ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಪಕ್ಷವು ರಾಜ್ಯಕ್ಕೆ ಸ್ವಾಯತ್ತತೆಯ ನಷ್ಟವನ್ನುಂಟು ಮಾಡಿದ್ದಕ್ಕೆ ವಿಷಾದಿಸಿದರು.

ಕಾಶ್ಮೀರ ಕುರಿತು ಹೇಳಿಕೆಗಳಿಗಾಗಿ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನೂ ಅಬ್ದುಲ್ಲಾ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News