ಪಾಕ್: 68 ಮಂದಿ ಭಾರತೀಯ ಮೀನುಗಾರರ ಬಿಡುಗಡೆ
ಕರಾಚಿ, ಅ.29: ಸದ್ಬಾವನೆಯ ಕ್ರಮವಾಗಿ ಪಾಕಿಸ್ತಾನವು ರವಿವಾರ ತನ್ನ ವಶದಲ್ಲಿದ್ದ 68 ಮಂದಿ ಭಾರತೀಯ ಮೀನುಗಾರರನ್ನು ಬಿಡುಗಡೆಗೊಳಿಸಿದೆ. ಪಾಕಿಸ್ತಾನದ ಸಾಗರಪ್ರದೇಶದೊಳಗೆ ಅತಿಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ ಈ ಮೀನುಗಾರರನ್ನು ಬಂಧಿಸಿ, ಕರಾಚಿಯ ಲಾಂಧಿ ಜೈಲಿನಲ್ಲಿಡಲಾಗಿತ್ತು.
ಬಿಡುಗಡೆಗೊಂಡ ಮೀನುಗಾರರು ಲಾಹೋರ್‌ನಿಂದ ರೈಲು ಮೂಲಕ ವಾಘಾ ಗಡಿಗೆ ಪ್ರಯಾಣಿಸಿದ್ದಾರೆ ಹಾಗೂ ಅಲ್ಲಿ ಪಾಕ್ ಅಧಿಕಾರಿಗಳು ಅವರನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಿದ್ದಾರೆ.
ಬಿಡುಗಡೆಗೊಂಡ ಮೀನುಗಾರರು ರವಿವಾರ ಬಿಗಿಭದ್ರತೆಯೊಂದಿಗೆ ಪೊಲೀಸ್ ವ್ಯಾನ್‌ಗಳಲ್ಲಿ ಲಾಹೋರ್ ರೈಲು ನಿಲ್ದಾಣ ತಲುಪಿದ್ದು, ಅಲ್ಲಿ ಅವರಿಗೆ ಎಧಿ ಪ್ರತಿಷ್ಠಾನದ ಕಾರ್ಯಕರ್ತರು ನಗದು ಹಾಗೂ ಉಡುಗೊರೆಗಳನ್ನು ವಿತರಿಸಿದರು.ಕಳೆದ ಜುಲೈನಲ್ಲಿ ಲಾಂಧಿ ಜೈಲಿನಿಂದ 78 ಮಂದಿ ಭಾರತೀಯ ಮೀನುಗಾರರನ್ನು ಬಂಧಮುಕ್ತಗೊಳಿಸಲಾಗಿತ್ತು. ಕರಾಚಿಯ ಲಾಂಧಿ ಜೈಲಿನಲ್ಲಿ ಇನ್ನೂ 200 ಮಂದಿ ಭಾರತೀಯ ಮೀನುಗಾರರು ಇದ್ದಾರೆಂದು ಸಿಂಧ್ ಪ್ರಾಂದತದ ಗೃಹ ಇಲಾಖೆಯ ಅಧಿಕಾರಿ ನಸೀಮ್ ಸಿದ್ದಿಕಿ ತಿಳಿಸಿದ್ದಾರೆ.