ರಶ್ಯದೊಂದಿಗೆ ಸಂಪರ್ಕ ಪ್ರಕರಣ: ಟ್ರಂಪ್ ಪ್ರಚಾರ ತಂಡದ ಮುಖ್ಯಸ್ಥ ಶರಣು

Update: 2017-10-30 17:03 GMT

ವಾಶಿಂಗ್ಟನ್, ಅ. 30: 2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪಕ್ಕೆ ಸಂಬಂಧಿಸಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಪ್ರಚಾರ ಸಮಿತಿಯ ಮಾಜಿ ಅಧ್ಯಕ್ಷ ಪೌಲ್ ಮನಫೋರ್ಟ್ ಮತ್ತು ಅವರ ಸಹಾಯಕ ರಿಕ್ ಗೇಟ್ಸ್ ಸೋಮವಾರ ಫೆಡರಲ್ ಅಧಿಕಾರಿಗಳ ಸಮ್ಮುಖದಲ್ಲಿ ಶರಣಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಶರಣಾಗುವಂತೆ ಅವರಿಗೆ ಸೂಚನೆ ನೀಡಿದ ಬಳಿಕ ಈ ಬೆಳವಣಿಗೆ ನಡೆದಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಮನಫೋರ್ಟ್ ಮತ್ತು ಗುರುತಿಸಲ್ಪಡದ ಇನ್ನೋರ್ವ ವ್ಯಕ್ತಿ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್‌ನ ವಾಶಿಂಗ್ಟನ್ ಫೀಲ್ಡ್ ಕಚೇರಿಗೆ ಹೋಗುತ್ತಿರುವುದು ಟೆಲಿವಿಶನ್ ಕ್ಯಾಮರಾಗಳಲ್ಲಿ ದಾಖಲಾಗಿವೆ.

 ಚುನಾವಣೆಯ ವೇಳೆ ರಶ್ಯ ಮತ್ತು ಟ್ರಂಪ್ ಪ್ರಚಾರದ ನಡುವಿನ ಸಂಭಾವ್ಯ ಸಮನ್ವಯದ ಬಗ್ಗೆ ವಿಶೇಷ ವಕೀಲ ರಾಬರ್ಟ್ ಮುಯಲ್ಲರ್ ನಡೆಸುತ್ತಿರುವ ತನಿಖೆಯಲ್ಲಿ ದೋಷಾರೋಪಣೆಗೆ ಒಳಗಾಗುತ್ತಿರುವ ಮೊದಲಿಗರು ಇವರಾಗಿದ್ದಾರೆ.

ಮನಫೋರ್ಟ್ ಮತ್ತು ಗೇಟ್ಸ್ ವಿರುದ್ಧ 12 ಆರೋಪಗಳಲ್ಲಿ ಫೆಡರಲ್ ಗ್ರಾಂಡ್ ಜೂರಿ ದೋಷಾರೋಪಣೆ ಹೊರಿಸಿದ್ದಾರೆ ಎಂದು ವಿಶೇಷ ವಕೀಲರ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.

ದೋಷಾರೋಪಣೆಯಲ್ಲಿ ಅಮೆರಿಕದ ವಿರುದ್ಧ ಪಿತೂರಿ ಮತ್ತು ಕಪ್ಪು ಹಣವನ್ನು ಬಿಳುಪು ಮಾಡಲು ಹೂಡಿದ ಪಿತೂರಿಗಳು ಸೇರಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News