ಹಿರಿಯ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಬಂಟ್ವಾಳ, ಅ.30: ಹಿರಿಯ ಯಕ್ಷಗಾನ ಕಲಾವಿದ ಶಿವರಾಮ ಜೋಗಿ ಬಿ.ಸಿ.ರೋಡ್ ಅವರು 2017ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ತನ್ನ ಕಿರೀಟಕ್ಕೆರಿಸಿದ್ದಾರೆ.
ಕಳೆದ ಹತ್ತು ವರ್ಷಗಳಿಂದ ಜೋಗಿಯವರು ತೆಂಕುತಿಟ್ಟಿನ ಪ್ರಸಿಧ್ಧ ಮೇಳವಾದ ಹೊಸನಗರ ಮೇಳದ ( ಈಗಿನ ಎಡನೀರು ) ಪ್ರಧಾನ ಕಲಾವಿದರಾಗಿದ್ದರು. ಯಾವುದೇ ಪಾತ್ರವನ್ನಾದರೂ ಸಮರ್ಥವಾಗಿ ನಿರ್ವಹಿಸಬಲ್ಲ ಶಿವರಾಮ ಜೋಗಿಯವರ ಅರ್ಥಗಾರಿಕೆಯೂ ಪೌಢ್ರಿಮೆಯಿಂದ ಕೂಡಿದೆ. ಉತ್ತಮ ಅಂಗಸೌಷ್ಟವ, ಕಂಚಿನ ಕಂಠ, ಶಾಸ್ತ್ರೀಯ ಹೆಜ್ಜೆಗಾರಿಕೆಯ ನಾಟ್ಯ, ಆಕರ್ಷಕ ವಾದ - ಪ್ರತಿವಾದ ಮಂಡನೆ ಎಲ್ಲವೂ ಜೋಗಿಯವರಲ್ಲಿ ಮೇಳೈಸಿದೆ.
1941ರ ಜೂ. 7ರಂದು ಕಾಂಚನ ಎಂಬ ಊರಲ್ಲಿ ಗುರುವಪ್ಪ ಜೋಗಿ - ಸೀತಮ್ಮ ದಂಪತಿಯ ಸುಪುತ್ರರಾಗಿ ಜನಿಸಿದ ಶಿವರಾಮ ಜೋಗಿಯವರು ತಮ್ಮ 15ರ ಹರೆಯದಲ್ಲೇ ಯಕ್ಷಗಾನ ಪ್ರವೇಶಿಸಿದರು. ಅವರಿಗೀಗ 76 ವರ್ಷಪ್ರಾಯವಾಗಿದೆ.
ಸುರತ್ಕಲ್ ಮೇಳ ಒಂದರಲ್ಲೇ ನಿರಂತರ 40 ವರ್ಷಗಳ ಕಾಲ ತೊಡಗಿಸಿಕೊಂಡಿದ್ದರು. ಯೌವನದ ಕಾಲದಲ್ಲಿ ಅಭಿಮನ್ಯು, ಬಭ್ರುವಾಹನ, ಭಾರ್ಗವ ಮುಂತಾದ ಪಾತ್ರಗಳಿಂದ ಪ್ರಸಿದ್ಧರಾಗಿದ್ದರು. ವಾಲಿ, ಇಂದ್ರಜಿತು, ಕಾರ್ತ್ಯವೀರ್ಯ, ತಾಮ್ರಧ್ವಜ, ಶಿಶುಪಾಲ, ಹನೂಮಂತ, ಕರ್ಣ, ಭೀಷ್ಮ, ಋತುಪರ್ಣ, ಕೋಟಿ, ಕಾಂತಬಾರೆ, ದೇವುಪೂಂಜ, ವೀರಚಂದ್ರ, ಕಿರಾತ ಶ್ರೀನಿವಾಸ, ಕುಮಾರ ರಾಮ, ಬಪ್ಪಬ್ಯಾರಿ ಮುಂತಾದ ಪಾತ್ರಗಳು ಜೋಗಿಯವರಿಗೆ ಅಪಾರ ಪ್ರಸಿದ್ಧಿಯನ್ನು ತಂದುಕೊಟ್ಟಿವೆ.
ಶಂಕರನಾರಾಯಣ ಸಾಮಗ, ಶೇಣಿ ತೆಕ್ಕಟ್ಟೆ ಆನಂದ ಮಾಸ್ತರ್, ಅಗರಿದ್ವಯ ಭಾಗವತರು, ರಾಮದಾಸ ಸಾಮಗ, ಕುಂಬ್ಳೆ, ಕೊಳ್ಯೂರು, ಕೊಕ್ಕಡ ಈಶ್ವರ ಭಟ್, ಪದ್ಯಾಣ ಗಣಪತಿ ಭಟ್ , ಬಾಬು ಕುಡ್ತಡ್ಕ , ಬಾಯಾರು ಪ್ರಕಾಶಚಂದ್ರ ರಾವ್ , ಕಡಬ ನಾರಾಯಣ ಆಚಾರ್ಯ ಮುಂತಾದ ಘಟಾನುಘಟಿಗಳೊಂದಿಗೆ ತಿರುಗಾಟ ನಡೆಸಿ ಅನುಭವ ಪಡೆದವರು. 'ಶಿವರಾಮ ಜೋಗಿ - ಕೊಕ್ಕಡ ಈಶ್ವರ ಭಟ್' ಜೋಡಿ ಆ ಕಾಲದಲ್ಲಿ ಪ್ರಸಿದ್ಧಿ ಹೊಂದಿತ್ತು.
ಈ ವರ್ಷ ತಮ್ಮ ನಿರಂತರ ತಿರುಗಾಟದ 62ನೇ ವರ್ಷದ ಹೊಸ್ತಿಲಲ್ಲಿ ಜೋಗಿಯವರಿದ್ದಾರೆ. ಪತ್ನಿ ಲತಾ ಹಾಗೂ ಪುತ್ರಿ ಸೌಮ್ಯಾ ಹಾಗೂ ಪುತ್ರ ಸುಮಂತ್ ರಾಜ್ ರೊಂದಿಗೆ ಬಿ.ಸಿ.ರೋಡ್ ನಲ್ಲಿ ವಾಸಿಸುತ್ತಿದ್ದಾರೆ.
ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಡಾ. ಕೀಲಾರು ಪ್ರಶಸ್ತಿ, ಡಾ. ಶೇಣಿ ಪ್ರಶಸ್ತಿ, ಕುರಿಯ ಪ್ರಶಸ್ತಿ, ಕನ್ನಡ ಮತ್ತು ಸಂಸ್ಕೃತಿ ಪ್ರಶಸ್ತಿ ಸಹಿತ ನೂರಕ್ಕೂ ಮಿಕ್ಕಿ ಪ್ರಶಸ್ತಿ ಸ್ವೀಕರಿಸಿದ ಜೋಗಿಯವರಿಗೆ ಇದೀಗ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಮುಡಿಗೇರಿದೆ.