×
Ad

ಕ್ರೀಡೆಗೆ ರಾಜ್ಯ ಸರಕಾರವೂ ಪ್ರೋತ್ಸಾಹಿಸಬೇಕು: ಜಗದೀಶ್ ಕುಂಬ್ಳೆ

Update: 2017-10-30 23:10 IST

ಮಂಗಳೂರು, ಅ.30: ಹರ್ಯಾಣದಲ್ಲಿ ಮಕ್ಕಳು ಮೈದಾನಕ್ಕಿಳಿಯಬೇಕು ಎಂದು ಪ್ರತಿಯೊಬ್ಬ ಪೋಷಕರೂ ಬಯಸುತ್ತಾರೆ. ಹಾಗಾಗಿ ಏಷ್ಯನ್ ಗೇಮ್ಸ್‌ನಲ್ಲಿ ಹರ್ಯಾಣದ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಅಲ್ಲಿನ ಸರಕಾರ, ಕಂಪೆನಿಗಳು ತುಂಬ ಪ್ರೋತ್ಸಾಹ ನೀಡುತ್ತವೆ. ಕರ್ನಾಟಕದಲ್ಲೂ ಕೂಡ ಪ್ರೋತ್ಸಾಹ ನೀಡಿದರೆ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳಲ್ಲಿ ಕಾಣಿಸಿಕೊಳ್ಳಬಹುದು ಎಂದು ಪ್ರೊ-ಕಬಡ್ಡಿಯಲ್ಲಿ ತೃತೀಯ ಸ್ಥಾನ ಪಡೆದ ಬೆಂಗಾಲ್ ವಾರಿಯರ್ಸ್ ತಂಡದ ಕೋಚ್ ಕಾಸರಗೋಡಿನ ಜಗದೀಶ್ ಕುಂಬ್ಳೆ ಅಭಿಪ್ರಾಯಪಟ್ಟರು.

ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು 2018ರ ಮೇಯಲ್ಲೇ ಪ್ರೊ ಕಬಡ್ಡಿ ಪಂದ್ಯ ಆರಂಭವಾಗುವ ನಿರೀಕ್ಷೆ ಇದೆ. ಹೊಸ ಅಟಗಾರರು ಹೆಚ್ಚನ ಸಂಖ್ಯೆಯಲ್ಲಿ ಕ್ರೀಡಾ ಕ್ಷೇತ್ರಕ್ಕೆ ಬರಬೇಕಾಗಿದೆ. ಕಬ್ಬಡಿ ಆಟಗಾರರಿಗೆ ಸರಕಾರ ಮತ್ತು ಕಾರ್ಪೊರೇಟ್ ಕಂಪೆನಿಗಳು ಉದ್ಯೋಗ ನೀಡಿ ಪ್ರೋತ್ಸಾಹಿಸಿದಾಗ ಮಾತ್ರ ಅವರು ಆಟದಲ್ಲಿ ಸಾಧನೆ ಮಾಡಲು ಸಾಧ್ಯ. ದ.ಕ. ಜಿಲ್ಲೆಯಲ್ಲಿ ಹಲವು ಕಂಪೆನಿಗಳಿದ್ದರೂ ಆಟಗಾರರಿಗೆ ಕೆಲಸ ನೀಡುವ ಸಾಧ್ಯತೆ ತೀರಾ ಕಡಿಮೆ. ರಾಜ್ಯ ಸರಕಾರ ಕೂಡ ಕಬಡ್ಡಿ ಆಟಗಾರರಿಗೆ ಉದ್ಯೋಗ ಕಲ್ಪಿಸಲು ಮುಂದಾಗದಿದ್ದರೆ ಸ್ಥಳೀಯ ಪ್ರತಿಭೆಗಳು ಕಮರಿ ಹೋಗುವ ಅಪಾಯವಿದೆ ಎಂದರು.

ದ.ಕ., ಉಡುಪಿ ಹಾಗೂ ಕಾಸರಗೋಡು ಸೇರಿದಂತೆ ಕರಾವಳಿ ಭಾಗದಲ್ಲಿ ಕಬಡ್ಡಿಯಲ್ಲಿ ಆಸಕ್ತಿ ಇರುವವರಿಗೆ ಪ್ರೋತ್ಸಾಹ ನೀಡಲು ನಾನು ಸದಾ ಸಿದ್ಧನಿದ್ದೇನೆ. ಸ್ಥಳೀಯ ಕಬಡ್ಡಿ ಪ್ರತಿಭೆಗಳಿಗೆ ವಿಶೇಷ ಅವಕಾಶ ದೊರಕಿಸಿಕೊಡುವ ನೆಲೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಪ್ರೊ-ಕಬಡ್ಡಿಯ 12 ತಂಡಗಳ ಪೈಕಿ ಬೆಂಗಾಲ್ ವಾರಿಯರ್ಸ್ ಏಳನೇ ಸ್ಥಾನದಲ್ಲಿತ್ತು. ಇದೀಗ ತಂಡ ಮೂರನೇ ಸ್ಥಾನಕ್ಕೆ ಏರಿರುವುದು ಹೆಮ್ಮೆಯ ಸಂಗತಿ. ಪ್ರೊ-ಕಬಡ್ಡಿಯಿಂದಾಗಿ ಕ್ರೀಡಾಭಿಮಾನಿಗಳು ನನ್ನ ಹೆಸರನ್ನು ಗುರುತಿಸುವಂತಾಯಿತು. ಎಲ್ಲಿ ಹೋದರೂ ಕನ್ನಡಿಗನೆಂದೇ ನಾನು ಗುರುತಿಸಿಕೊಳ್ಳುತ್ತೇನೆ’ ಎಂದು ಜಗದೀಶ್ ಕುಂಬ್ಳೆ ನುಡಿದರು.

ಪ್ರೊ ಕಬಡ್ಡಿ ಪಂದ್ಯದಿಂದಾಗಿ ದೇಸೀ ಕ್ರೀಡೆಗೆ ಮಹತ್ವ ಬಂದಿದೆ. ಆಟಗಾರರಿಗೆ ಮತ್ತು ಕೋಚ್‌ಗಳಿಗೆ ನೀಡುವ ಸಂಭಾವನೆಯಲ್ಲಿ ಹೆಚ್ಚಳವಾಗಿದೆ. ಮಾಧ್ಯಮ ಸಂಸ್ಥೆಗಳೂ ಈ ದೇಸೀ ಕ್ರೀಡೆಗೆ ಹೆಚ್ಚು ಪ್ರಚಾರ ನೀಡಿ ಕ್ರೀಡಾಪ್ರಿಯರಲ್ಲಿ ಉತ್ಸಾಹ ಮೂಡಿಸಿವೆ ಎಂದರು.

ದ.ಕ.ಜಿಲ್ಲಾ ಅಮೆಚ್ಯೂರ್ ಕಬಡ್ಡಿ ಸಂಘಟನೆಯ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ ಮಾತನಾಡಿ, ಜಿಲ್ಲೆಯಲ್ಲಿ ಉತ್ತಮ ಆಟಗಾರರಿದ್ದರೂ ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪಂದ್ಯಗಳಲ್ಲಿ ಭಾಗವಹಿಸುವ ಆಸಕ್ತಿ ತೋರಿಸುವುದಿಲ್ಲ. ಉದ್ಯೋಗಕ್ಕೆ ಬದ್ಧರಾಗಿರುವ ಅನಿವಾರ್ಯತೆ, ಆರ್ಥಿಕ ಸಂಪನ್ಮೂಲ ಕೊರತೆ ಅವರ ಪ್ರತಿಭೆಯನ್ನು ಜಿಲ್ಲೆಗೆ ಸೀಮಿತಗೊಳಿಸಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉತ್ತರ ಕನ್ನಡ ಜಿಲ್ಲಾ ಅಮೆಚ್ಯೂರ್ ಕಬಡ್ಡಿ ಸಂಘಟನಾ ಕಾರ್ಯದರ್ಶಿ ಅನಿಲ್ ಕುಮಾರ್, ಕಬಡ್ಡಿ ಆಟಗಾರ ಮೊಯಿದ್ದೀನ್ ಇರಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News