ಗಾಂಜಾ ಮಾರಾಟಕ್ಕೆ ಯತ್ನ: ಆರೋಪಿ ಸೆರೆ
Update: 2017-10-30 23:13 IST
ಮಂಗಳೂರು, ಅ.30: ನಗರದ ಕೋಡಿಕಲ್ ಕ್ರಾಸ್ ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯೊಬ್ಬನನ್ನು ಮಂಗಳೂರು ನಗರ ಕೇಂದ್ರ ಉಪವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಗುರುಪುರ ಕೈಕಂಬದ ಕಿನ್ನಿಕಂಬಳ ನಿವಾಸಿ ಮುಹಮ್ಮದ್ ಶಾಕೀರ್ (23) ಬಂಧಿತ ಆರೋಪಿ. ಉರ್ವ ಸಮೀಪದ ಕೋಡಿಕಲ್ 10ಬಿ ಕ್ರಾಸ್ ಬಳಿ ಈತ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿ 1.80 ಕೆ.ಜಿ. ತೂಕದ ಗಾಂಜಾ, 2 ಮೊಬೈಲ್, 1 ಬೈಕ್ ಮತ್ತು ನಗದನ್ನು ವಶಪಡಿಸಿಕೊಂಡಿದ್ದಾರೆ. ಇವೆಲ್ಲವುಗಳ ಮೌಲ್ಯ 1, 19, 450 ರೂ. ಎಂದು ಅಂದಾಜಿಸಲಾಗಿದೆ.
ಆರೋಪಿಯ ವಿರುದ್ಧ ಉರ್ವ ಠಾಣೆಯಲ್ಲಿ ಎಸ್‌ಎನ್‌ಡಿಪಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆಯಲ್ಲಿ ರೌಡಿ ನಿಗ್ರಹ ದಳದ ಮುಖ್ಯಸ್ಥ ಉದಯ ನಾಯಕ್, ಇನ್‌ಸ್ಪೆಕ್ಟರ್ ರವೀಶ್ ನಾಯಕ್, ಕೃಷ್ಣ ಬಿ., ಎಸ್ಸೈ ಬಾಲಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು.