ಮೋಜಿಗಾಗಿ ಸೇತುವೆಯಿಂದ ನದಿಗೆ ಹಾರಿದ ಯುವಕ ಮೃತ್ಯು
ಉಡುಪಿ, ಅ.31: ಮೋಜಿಗಾಗಿ ಪೆರಂಪಳ್ಳಿ ರೈಲ್ವೆ ಸೇತುವೆಯಿಂದ ಸ್ವರ್ಣ ನದಿಗೆ ಹಾರಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಆತನ ಮೃತದೇಹವು ಇಂದು ಸಂಜೆ ವೇಳೆ ಅದೇ ಸ್ಥಳದಲ್ಲಿ ಪತ್ತೆಯಾಗಿದೆ.
ಮೃತರನ್ನು ಹುಬ್ಬಳ್ಳಿ ಮೂಲದ ಕಾಪು ನಿವಾಸಿ ಸಾದಿಕ್ (29) ಎಂದು ಗುರುತಿಸಲಾಗಿದೆ. ಸಾದಿಕ್‌ನನ್ನು ರಕ್ಷಿಸಲು ನೀರಿಗೆ ಹಾರಿದ ಮಣಿಪಾಲ ಸರಳ ಬೆಟ್ಟುವಿನ ಸಿಯಾನ್ (32) ಎಂಬವರು ಅಸ್ವಸ್ಥಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾದಿಕ್ ತನ್ನ ಗೆಳೆಯರೊಂದಿಗೆ ಪೆರಂಪಳ್ಳಿಯ ಸ್ವರ್ಣ ನದಿಯ ರೈಲ್ವೆ ಸೇತುವೆ ಬಳಿ ವಿಹಾರಕ್ಕೆ ತೆರಳಿದ್ದರು. ಅಲ್ಲಿ ಇವರೆಲ್ಲರು ನದಿಯನ್ನು ವೀಕ್ಷಿಸಲು ಸೇತುವೆ ಅಡಿ ಭಾಗಕ್ಕೆ ಹೋಗಿ ಕುಳಿತ್ತಿದ್ದರು. ಅಲ್ಲಿ ಮೋಜು ಮಾಡುತ್ತಿದ್ದ ತಂಡದಲ್ಲಿ ಸಾದಿಕ್ ನದಿಯಲ್ಲಿ ಈಜುವುದಾಗಿ ಹೇಳಿ ಸೇತುವೆಯಿಂದ ನದಿಗೆ ಹಾರಿದ್ದಾರೆನ್ನಲಾಗಿದೆ. ಸ್ವಲ್ಪ ಹೊತ್ತು ಈಜಿದ ಅವರು ಬಳಿಕ ಧಣಿದು ನೀರಿನಲ್ಲಿ ಮುಳುಗಲಾರಂಭಿಸಿದರು. ಇದನ್ನು ನೋಡಿದ ಸಿಯಾನ್ ಕೂಡಲೇ ನದಿಗೆ ಹಾರಿ ಸಾದಿಕ್‌ನನ್ನು ರಕ್ಷಿಸಲು ಪ್ರಯತ್ನಿಸಿದರು. ಆದರೆ ಸಿಯಾನ್‌ಗೆ ಸಾಧ್ಯವಾಗದೆ ಆತ ಕೂಡ ನೀರಿನಲ್ಲಿ ಮುಳುಗಿದ್ದು, ಇದನ್ನು ಸಮೀಪದಲ್ಲಿದ್ದ ದೋಣಿಯಲ್ಲಿದ್ದವರು ಗಮನಿಸಿ ಸಿಯಾನ್ ನನ್ನು ರಕ್ಷಿಸಿ ಪ್ರಥಮ ಚಿಕಿತ್ಸೆ ನೀಡಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರು.
ಇಂದು ಬೆಳಗ್ಗೆ ಅಗ್ನಿಶಾಮಕದಳ ಹಾಗೂ ಸ್ಥಳೀಯರು ಸಾದಿಕ್‌ಗಾಗಿ ಹುಡುಕಾಟ ನಡೆಸಿದ್ದು, ಸಂಜೆ ವೇಳೆ ಆತನ ಮೃತದೇಹ ಅದೇ ಸ್ಥಳದಲ್ಲಿ ಪತ್ತೆಯಾ ಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.