ರಾಜ್ಯೋತ್ಸವ ಪ್ರಶಸ್ತಿ ತಿರಸ್ಕರಿಸಿದ ಡಾ. ರವೀಂದ್ರನಾಥ ಶಾನುಭಾಗ್

Update: 2017-10-31 16:16 GMT

ಉಡುಪಿ, ಅ. 31: ಸಮಾಜ ಸೇವಾ ಕ್ಷೇತ್ರದಲ್ಲಿ ರಾಜ್ಯ ಸರಕಾರ ತನಗೆ ನೀಡಿರುವ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಯನ್ನು ತಿರಸ್ಕರಿಸಲು ಮಾನವ ಹಕ್ಕುಗಳ ಹೋರಾಟಗಾರ ಹಾಗೂ ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶಾನುಭಾಗ್ ನಿರ್ಧರಿಸಿದ್ದಾರೆ.

ಇಂದು ಪತ್ರಿಕೆಗಳಿಗೆ ಬಿಡುಗಡೆಗೊಳಿಸಿದ ಪತ್ರಿಕಾ ಹೇಳಿಕೆಯಲ್ಲಿ ಪ್ರತಿಷ್ಠಿತ ಪ್ರಶಸ್ತಿಯನ್ನು ತಿರಸ್ಕರಿಸಲು ಕಾರಣಗಳನ್ನು ವಿವರಿಸಿರುವ ಅವರು, ಯಾವ ಪುರುಷಾರ್ಥಕ್ಕಾಗಿ ತಾನೀ ಪ್ರಶಸ್ತಿ ಸ್ವೀಕರಿಸಬೇಕು ಎಂದು ಪ್ರಶ್ನಿಸಿದ್ದಾರೆ.

ಅವರ ಹೇಳಿಕೆಯ ಪೂರ್ಣಪಾಠ ಹೀಗಿದೆ

ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಎಂಬುದು ಲೇಖಕರಿಗೆ, ಕ್ರೀಡಾಳುಗಳಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾರ್ಥಕ ಸೇವೆ ಮಾಡಿರುವ ಸಾಧಕರನ್ನು ಗುರುತಿಸಿ ಸರಕಾರ ನೀಡುವ ಗೌರವ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಸಮಾಜ ಸೇವೆ ವಿಭಾಗದಲ್ಲಿ ಈ ಪ್ರಶಸ್ತಿಗಾಗಿ ನನ್ನನ್ನು ಗುರುತಿಸಿರುವ ರಾಜ್ಯ ಸರಕಾರಕ್ಕೆ ನಾನು ಆಭಾರಿಯಾಗಿದ್ದೇನೆ.

ಅದರೆ ನನ್ನ ಸಮಾಜ ಸೇವೆ ಸಾಕಷ್ಟು ನೊಂದವರಿಗೆ ತಲುಪಿದ ಬಗ್ಗೆ ನನಗೇ ತೃಪ್ತಿಯಾಗಿಲ್ಲದಿರುವಾಗ, ನಾನು ಯಾರಿಗಾಗಿ ಹೋರಾಟ ಮಾಡುತಿದ್ದೇನೋ ಅವರಲ್ಲಿ ಸಾಕಸ್ಟು ಮಂದಿಗೆ ಇನ್ನೂ ನ್ಯಾಯ ಸಿಗದಿರುವಾಗ, ದೌರ್ಜನ್ಯಕ್ಕೆ ಒಳಗಾದ ನೂರಾರು ಹಿರಿಯ ನಾಗರಿಕರು ನನ್ನ ಮುಂದೆ ಪ್ರತಿನಿತ್ಯ ಕಣ್ಣೀರಿಡುವಾಗ ಯಾವ ಪುರುಷಾರ್ಥಕ್ಕಾಗಿ ನಾನೀ ಪ್ರಶಸ್ತಿಯನ್ನು ಸ್ವೀಕರಿಸಲಿ? ಈ ಕುರಿತು ಹಿರಿಯ ಅಧಿಕಾರಿಗಳಿಗೆ ಹಾಗೂ ಮಂತ್ರಿಗಳಿಗೆ ಪತ್ರ ಬರೆದಲ್ಲಿ ಉತ್ತರಿಸುವ ಕನಿಷ್ಠ ಸೌಜನ್ಯವೂ ಅವರಿಗಿಲ್ಲ. ಇನ್ನೂ ಹಲವಾರು ಮಂದಿ ನ್ಯಾಯಾಲಯದ ಆದೇಶ ಹಿಡಿದುಕೊಂಡು ಇಲಾಖೆಯಿಂದ ಇಲಾಖೆಗೆ ಸುತ್ತಾಡುತಿದ್ದಾರೆ. ಎಂಟು ಮಂದಿ ಹಿರಿಯ ನಾಗರಿಕರು ನ್ಯಾಯ ಸಿಗುವ ಮೊದಲೇ ಮೃತಪಟ್ಟಿದ್ದಾರೆ. ಪ್ರಶಸ್ತಿ ಸ್ವೀಕರಿಸಿದರೆ ನಾನು ಅವರ ಆತ್ಮಗಳಿಗೆ ಅವಮಾನ ಮಾಡಿದಂತಾಗದೆ ?

ನಾನು ಎಷ್ಟು ಸಮಾಜ ಸೇವೆ ಮಾಡಿದ್ದೇನೆ ಎಂಬುದು ಮುಖ್ಯವಲ್ಲ. ಇದರಿಂದ ಎಷ್ಟು ಜನರಿಗೆ ನ್ಯಾಯ ಸಿಕ್ಕಿದೆ ಎಂಬುದೇ ನನಗೆ ಮುಖ್ಯ. ರಾಜ್ಯಾದ್ಯಂತದ ಹಿರಿಯ ನಾಗರಿಕರು ನೂರಾರು ಸಂಖ್ಯೆಯಲ್ಲಿ ನನ್ನ ಬಳಿ ಬರುತ್ತಿದ್ದಾರೆ. ಕೈ ಹಿಡಿದು ಕಣ್ಣೀರಿಡುತ್ತಿದ್ದಾರೆ. ಸರಕಾರ ಹಿರಿಯ ನಾಗರಿಕರ ಕಾನೂನನ್ನು ಪಾಲಿಸದೆ ಗಾಳಿಗೆ ತೂರಿದೆ. ಯಾರಿಗಾಗಿ ನಾನು ಕಾರ್ಯಾಚರಿಸಿರುವ ಬಗ್ಗೆ ನನಗೇ ತೃಪ್ತಿಯಾಗದಿರುವಾಗ ಏತಕ್ಕಾಗಿ ಈ ಪ್ರಶಸ್ತಿ ಸ್ವೀಕಾರ ಮಾಡಲಿ?

ಚಿಕ್ಕಮಗಳೂರು ಜಿಲ್ಲೆಯ ಕಡೂರು ಹಾಗೂ ಬೀರೂರಿನ ಮುನ್ನೂರಕ್ಕೂ ಹೆಚ್ಚಿನ ಅಂಗನವಾಡಿ ಶಿಕ್ಷಕಿಯರು ತಮ್ಮ ಯಾವುದೇ ತಪ್ಪು ಇಲ್ಲದೆ, ಎಲ್‌ಐಸಿ ಯಿಂದ ಮೋಸ ಹೋಗಿ ಲಕ್ಷಾಂತರ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ. ಇದೀಗ ಆತ್ಮಹತ್ಯೆ ಮಾಡಿಕೊಳ್ಳುವ ಹಂತ ತಲುಪಿದ್ದಾರೆ. ಪೊಲೀಸ್ ಹಾಗೂ ಉನ್ನತ ಸರಕಾರಿ ಅಧಿಕಾರಿಗಳಿಗೆ ಪತ್ರ ಬರೆದರೆ ಯಾವುದೇ ಸ್ಪಂದನೆಯೂ ಇಲ್ಲವಾಗಿದೆ. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸುಮಾರು ಎಂಟು ಸಾವಿರದಷ್ಟು ಮಂದಿ ಎಂಡೋಸಲ್ಫಾನ್ ಪೀಡಿತರಲ್ಲಿ ಇನ್ನೂ ಸಾವಿರಾರು ಮಂದಿ ಸಂತ್ರಸ್ತರು ನ್ಯಾಯವಾಗಿ ಪಡೆಯಬೇಕಾದ ನೆರವನ್ನು ಪಡೆಯುತ್ತಿಲ್ಲ.

ಉಡುಪಿ ಜಿಲ್ಲಾ ಅರೋಗ್ಯ ಇಲಾಖೆಯಿಂದ ಕುಂದಾಪುರ ತಾಲೂಕಿನ ನೂರಾರು ಮಕ್ಕಳಿಗೆ ಮಾಶಸನ ಸಿಗುವುದು ಬಿಡಿ, ಇನ್ನೂ ಅವರ ನೋಂದಣಿ ಕೂಡಾ ಆಗಿಲ್ಲ. ಉಡುಪಿ ಜಿಲ್ಲೆಯಲ್ಲಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಡೇ ಕೇರ್ ಸೆಂಟರ್, ಶಾಶ್ವತ ವಸತಿ ನಿಲಯಗಳ ನಿರ್ಮಾಣವಾಗಿಲ್ಲ. ಈ ಕುರಿತು ನೋವು ಸಂಕಷ್ಟ ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಂಡ ಎಳೆಯ ಮಕ್ಕಳನ್ನು ನಾನು ಅಸಹಾಯಕನಾಗಿ ನೋಡಬೇಕಾಯಿತು. ಈ ಕುರಿತು ಸಮಾಲೋಚನೆಗೆ ಹೋದಾಗ ಉಡುಪಿಯ ಈ ಹಿಂದಿನ ಜಿಲ್ಲಾಧಿಕಾರಿ ಡಾ. ವಿಶಾಲ್ ಎನ್ನುವವರು ‘ಈ ಕುರಿತು ಏನು ಮಾಡಬೇಕೆಂದು ನಮಗೆ ಗೊತ್ತಿದೆ, ನಿಮಗೇಕೆ ಉಸಾಬರಿ’ ಎಂದು ಕೇಳಿದ್ದರು.

ಪ್ರತಿನಿತ್ಯ ಹೆಣ್ಣುಮಕ್ಕಳ ಮಾನವ ಕಳ್ಳಸಾಗಣೆ ನಡೆಯುತ್ತಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಡಾ. ಜಗದೀಶ್ ಎನ್ನುವವರಿಗೆ ಪತ್ರಗಳ ಸರಮಾಲೆ ಬರೆದು ವರ್ಷ ಕಳೆಯಿತು. ಉತ್ತರವೇ ಇಲ್ಲ. ವೈಯಕ್ತಿಕವಾಗಿ ಭೇಟಿಯಾಗಿ ವಿವರಿಸಿದಾಗ ವಿಚಾರವನ್ನು ತಿಳಿದುಕೊಳ್ಳುವ ಕನಿಷ್ಟ ಸೌಜನ್ಯವೂ ಈ ಅಧಿಕಾರಿಗಳಿಗಿಲ್ಲ. ಸಮಸ್ಯೆಯೂ ಪರಿಹಾರವಾಗಿಲ್ಲ. ಅನಧಿಕೃತ ಎಜಂಟ್‌ಗಳ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. ಹೆಣ್ಣುಮಕ್ಕಳ ಮಾನವ ಕಳ್ಳಸಾಗಣೆಯ ವ್ಯವಹಾರ ಅವ್ಯಾಹತವಾಗಿ ಇನ್ನೂ ನಡೆಯುತ್ತಿದೆ.

ನಾಗರಿಕರೊಂದಿಗೆ ಹೇಗೆ ಮಾತನಾಡಬೇಕು ಎಂದೂ ತಿಳಿಯದ ಇಂತಹ ಅಧಿಕಾರಿಗಳಿರುವಾಗ ನಮ್ಮಂತಹ ಸಾಮಾಜಿಕ ಕಾರ್ಯಕರ್ತರು ಹೇಗೆ ಕೆಲಸ ಮಾಡಬೇಕು? ಯಾರಿಗಾಗಿ ಏಕೆ ಅವಮಾನಿಸಿಕೊಳ್ಳಬೇಕು? ಎಂಡೋಸಲ್ಫಾನ್ ಪೀಡಿತರು ಬೀದಿಯಲ್ಲಿ ಭಿಕ್ಷೆ ಬೇಡುತ್ತಿರುವಾಗ ಹಾಗೂ ಹಿರಿಯ ನಾಗರಿಕರು ಪ್ರತಿನಿತ್ಯ ಕಣ್ಣೀರಿಡುತ್ತಿರುವಾಗ ನಾನು ಈ ಪ್ರಶಸ್ತಿ ಸ್ವೀಕರಿಸಿದರೆ ಸಂತ್ರಸ್ತರ ಮುಖದಲ್ಲಿ ನಗು ಕಾಣಲು ಸಾಧ್ಯವೇ?

ಸಾಗರದಲ್ಲಿ ಒಂದೂವರೆ ಸಾವಿರ ಎಕ್ರೆ ಕಾಡನ್ನು ಕೃಷಿ ವಿಶ್ವವಿದ್ಯಾನಿಲಯಕ್ಕೆ ನಾಶ ಮಾಡುತ್ತಿದ್ದಾರೆ. ಶಾಲಾ ಕಾಲೇಜು ಮಕ್ಕಳಿಗಾಗಿ ಕಾಳಜಿ ಅಲ್ಲಿನ ಜನ ಪ್ರತಿನಿಧಿಗಳಿಗಿಲ್ಲ. ಇಂತದ್ದೆಲ್ಲ ಘಟನೆ ಕಣ್ಣಮುಂದೆ ನಡೆಯುತ್ತಿರುವಾಗ ನಾನು ಪ್ರಶಸ್ತಿ ಸ್ವೀಕರಿಸುವುದರಲ್ಲಿ ಏನು ಅರ್ಥವಿದೆ? ಯಾವ ಪ್ರಶಸ್ತಿಯೂ ಇಲ್ಲದೆ ಸಂತ್ರಸ್ಥರ ಕಣ್ಣೀರೊರೆಸುವ ಕೆಲಸದಲ್ಲೇ ನಾನು ಪ್ರಶಸ್ತಿಯ ಖುಷಿಯನ್ನು ಪಡೆಯುತ್ತೇನೆ.

ಪ್ರಚಾರದ ಅಗತ್ಯವಿಲ್ಲ: ಪ್ರಶಸ್ತಿಯನ್ನು ತಿರಸ್ಕರಿಸುವ ಮೂಲಕ ಭಾರೀ ಪ್ರಚಾರ ಸಿಗುತ್ತದೆ ಎಂಬ ಉದ್ದೇಶವಂತೂ ಇಲ್ಲವೇ ಇಲ್ಲ. ಹೆಸರು ಮಾಡಬೇಕಾದ ಅಗತ್ಯವೂ ನನಗಿಲ್ಲ. ಪ್ರಶಸ್ತಿಯ ಬಗ್ಗೆ ಅಥವಾ ಈ ವ್ಯವಸ್ಥೆಯ ಬಗ್ಗೆ ನನಗೆ ಯಾವ ಅಸಮಧಾನವೂ ಇಲ್ಲ-ಅಗೌರವವೂ ಇಲ್ಲ. ನನ್ನ ಈ ಸಣ್ಣ ಕಾರ್ಯ ವಿಧಾನದಿಂದಾದರೂ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಜ್ಞಾನೋದಯ ಆದರೆ ಆಗಲಿ. ಜಾಗೃತಿ ಮೂಡಿದರೆ ಮೂಡಲಿ ಎಂಬುದಷ್ಟೇ ನನ್ನ ಆಶಯ.
-ಡಾ.ರವೀಂದ್ರನಾಥ ಶಾನುಭಾಗ್,
ಅಧ್ಯಕ್ಷರು, ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಉಡುಪಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News