ಎಐಎಫ್‌ಎಫ್ ಅಧ್ಯಕ್ಷ ಆಯ್ಕೆ ರದ್ದುಪಡಿಸಿದ ದಿಲ್ಲಿ ಹೆಕೋರ್ಟ್

Update: 2017-10-31 18:32 GMT

ಹೊಸದಿಲ್ಲಿ, ಅ.31: ಪ್ರಫುಲ್ ಪಟೇಲ್ ಕಳೆದ ವರ್ಷ ಸತತ ಮೂರನೆ ಬಾರಿ ಅಖಿಲ ಭಾರತ ಫುಟ್ಬಾಲ್ ಅಸೋಸಿಯೇಶನ್(ಎಐಎಫ್‌ಎಫ್) ಅಧ್ಯಕ್ಷರಾಗಿ ನಾಲ್ಕು ವರ್ಷ ಅವಧಿಗೆ ಆಯ್ಕೆಯಾಗಿದ್ದರು. ಇದೀಗ ಪಟೇಲ್ ಆಯ್ಕೆಯನ್ನು ರದ್ದುಪಡಿಸಿರುವ ದಿಲ್ಲಿ ಹೈಕೋರ್ಟ್ ಎಐಎಫ್‌ಎಫ್‌ಗೆ ಹೊಸ ಚುನಾವಣೆ ನಡೆಸುವಂತೆ ಆದೇಶಿಸಿದೆ.

ರಾಷ್ಟ್ರೀಯ ಕ್ರೀಡಾ ಸಂಹಿತೆಯನ್ನು ಪಾಲಿಸದೇ ಎಐಎಫ್‌ಎಫ್ ಚುನಾವಣೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಪಟೇಲ್ ಆಯ್ಕೆಯನ್ನು ರದ್ದುಪಡಿಸಲಾಗಿದೆ. ಮುಂದಿನ ಐದು ತಿಂಗಳಲ್ಲಿ ಹೊಸ ಚುನಾವಣೆ ನಡೆಸಬೇಕು ಎಂದು ಎಸ್.ರವೀಂದ್ರ ಭಟ್ ಹಾಗೂ ನಜ್ಮಿ ವಾಝಿರಿ ಅವರಿದ್ದ ನ್ಯಾಯಪೀಠ ಆದೇಶಿಸಿದೆ. ಎಐಎಫ್‌ಎಫ್ ಕಾರ್ಯ ಚಟುವಟಿಕೆಯನ್ನು ನೋಡಿಕೊಳ್ಳಲು ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೇಶಿ ಅವರನ್ನು ಎಐಎಫ್‌ಎಫ್ ಆಡಳಿತಾಧಿಕಾರಿಯನ್ನಾಗಿ ಹೈಕೋರ್ಟ್ ನೇಮಕ ಮಾಡಿದೆ.

ರಾಷ್ಟ್ರೀಯ ಕ್ರೀಡಾ ಸಂಹಿತೆಯನ್ನು ಉಲ್ಲಂಘಿಸಿ ಎಐಎಫ್‌ಎಫ್ ಚುನಾವಣೆ ನಡೆಸಿದ್ದನ್ನು ಪ್ರಶ್ನಿಸಿ ವಕೀಲ ರಾಹುಲ್ ಮೆಹ್ರಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

 ಮಾಜಿ ನಾಗರಿಕ ವಿಮಾನ ಯಾನ ಸಚಿವ ಪಟೇಲ್ ಕಳೆದ ವರ್ಷ ಡಿಸೆಂಬರ್‌ನಲ್ಲಿ 2017-2020ರ ಅವಧಿಗೆ ಎಐಎಫ್‌ಎಫ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಪ್ರಿಯರಂಜನ್ ದಾಸ್‌ಮುನ್ಶಿ ಹೃದಯಾಘಾತದಿಂದ ನಿಧನರಾದಾಗ 2008ರಲ್ಲಿ ಪಟೇಲ್ ಮೊದಲ ಬಾರಿ ಪ್ರಭಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಕ್ಟೋಬರ್ 2009ರಲ್ಲಿ ಪೂರ್ಣಕಾಲಿಕವಾಗಿ ಮೊದಲ ಬಾರಿ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿದ್ದರು. 2012ರ ಡಿಸೆಂಬರ್‌ನಲ್ಲಿ ಎರಡನೆ ಅವಧಿಗೆ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News