ಪದ್ಮಶ್ರೀ ಪ್ರಶಸ್ತಿಗೆ ಕೆ.ಶ್ರೀಕಾಂತ್ ಹೆಸರು ಶಿಫಾರಸು

Update: 2017-11-01 13:14 GMT

ಹೊಸದಿಲ್ಲಿ, ನ.1: ಕ್ಯಾಲೆಂಡರ್ ವರ್ಷದಲ್ಲಿ ನಾಲ್ಕು ಸೂಪರ್ ಸರಣಿಗಳನ್ನು ಜಯಿಸಿದ ಭಾರತದ ಮೊದಲ ಹಾಗೂ ವಿಶ್ವದ ನಾಲ್ಕನೆ ಆಟಗಾರನೆಂಬ ಕೀರ್ತಿಗೆ ಭಾಜನರಾಗಿರುವ ಭಾರತದ ನೂತನ ಬ್ಯಾಡ್ಮಿಂಟನ್ ಸೂಪರ್‌ಸ್ಟಾರ್ ಕಿಡಂಬಿ ಶ್ರೀಕಾಂತ್ ಹೆಸರನ್ನು ಪ್ರತಿಷ್ಠಿತ ಪದ್ಮ ಶ್ರೀ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಮಾಜಿ ಕ್ರೀಡಾ ಸಚಿವ ವಿಜಯ್ ಗೋಯೆಲ್ ಹೈದರಾಬಾದ್ ಆಟಗಾರ ಶ್ರೀಕಾಂತ್ ಹೆಸರನ್ನು ಪದ್ಮ ಪ್ರಶಸ್ತಿಗೆ ಶಿಫಾರಸು ಮಾಡಿದ್ದಾರೆ.

ಪ್ರಸ್ತುತ ಸಂಸದೀಯ ವ್ಯವಹಾರ ಸಚಿವರಾಗಿರುವ ಗೋಯೆಲ್ ಬುಧವಾರ ಗೃಹ ಸಚಿವ ರಾಜ್‌ನಾಥ್ ಸಿಂಗ್‌ಗೆ ಪತ್ರ ಬರೆದು ದೇಶದ ನಾಲ್ಕನೆ ಉನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀಗೆ ಶ್ರೀಕಾಂತ್ ಹೆಸರನ್ನು ಶಿಫಾರಸು ಮಾಡಿದ್ದಾರೆ.

ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಲು ಸೆ.15 ಮಧ್ಯರಾತ್ರಿ ಅಂತಿಮ ಗಡುವಾಗಿತ್ತು.

‘‘ಶ್ರೀಕಾಂತ್ ದೇಶದ ಕೋಟ್ಯಂತರ ಯುವ ಆಟಗಾರರಿಗೆ ಆದರ್ಶ ಹಾಗೂ ಸ್ಫೂರ್ತಿಯಾಗಿದ್ದಾರೆ. ಮಾಜಿ ಕ್ರೀಡಾ ಸಚಿವನಾಗಿರುವ ತನ್ನನ್ನು ಸಂಪರ್ಕಿಸಿದ ಹಲವರು ಈ ವರ್ಷದ ಪದ್ಮಶ್ರೀ ಪ್ರಶಸ್ತಿಗೆ ಶ್ರೀಕಾಂತ್ ಹೆಸರನ್ನು ಶಿಫಾರಸು ಮಾಡುವಂತೆ ಒತ್ತಾಯಿಸಿದ್ದಾರೆ. ನಾನು ಪದ್ಮಶ್ರೀ ಪ್ರಶಸ್ತಿಗೆ ಶ್ರೀಕಾಂತ್ ಹೆಸರನ್ನು ಶಿಫಾರಸು ಮಾಡಿದ್ದೇನೆ’’ ಎಂದು ಗೋಯೆಲ್ ಹೇಳಿದ್ದಾರೆ.

ಶ್ರೀಕಾಂತ್ ಪ್ಯಾರಿಸ್‌ನಲ್ಲಿ ಇತ್ತಿಚೆಗೆ ನಡೆದಿದ್ದ ಫ್ರೆಂಚ್ ಓಪನ್ ಸೂಪರ್ ಸರಣಿಯಲ್ಲಿ ಜಪಾನ್‌ನ ಕೆಂಟಾ ನಿಶಿಮೊಟೊರನ್ನು 21-14,21-13 ಅಂತರದಿಂದ ಮಣಿಸಿ ಪ್ರಶಸ್ತಿ ಜಯಿಸಿದ್ದರು. ಚೀನಾದ ದಂತಕತೆಗಳಾದ ಲಿನ್ ಡಾನ್, ಚೆನ್ ಲಾಂಗ್ ಹಾಗೂ ಮಲೇಷ್ಯಾದ ಲೀ ಚಾಂಗ್ ವೀ ಬಳಿಕ ಒಂದೇ ಋತುವಿನಲ್ಲಿ ನಾಲ್ಕು ಸೂಪರ್ ಸರಣಿ ಪ್ರಶಸ್ತಿ ಜಯಿಸಿದ ವಿಶ್ವದ ನಾಲ್ಕನೆ ಆಟಗಾರನಾಗಿದ್ದಾರೆ.

24ರ ಹರೆಯದ ಶ್ರೀಕಾಂತ್ ಈವರ್ಷ ನಾಲ್ಕು ಬ್ಯಾಡ್ಮಿಂಟನ್ ಸೂಪರ್ ಸರಣಿಯಲ್ಲಿ ಐದು ಬಾರಿ ಫೈನಲ್‌ಗೆ ತಲುಪಿದ್ದು, ಈ ಪೈಕಿ ಸಿಂಗಾಪುರ ಓಪನ್‌ನಲ್ಲಿ ರನ್ನರ್ಸ್-ಅಪ್ ಎನಿಸಿಕೊಂಡಿದ್ದರು.

ಮಹಿಳಾ ಶಟ್ಲರ್ ಪಿ.ವಿ.ಸಿಂಧು ಹಾಗೂ ಮಾಜಿ ಕ್ರಿಕೆಟ್ ನಾಯಕ ಎಂಎಸ್ ಧೋನಿ ಹೆಸರನ್ನು ಪದ್ಮಭೂಷಣ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ.

ಪದ್ಮ ವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿಗಳನ್ನು ಪ್ರತಿವರ್ಷ ಗಣರಾಜ್ಯೋತ್ಸವದಂದು ಪ್ರದಾನಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News