ನ.3: ಕೆಪಿಎಂಇ ಮಸೂದೆ ವಿರೋಧಿಸಿ ಖಾಸಗಿ ವೈದ್ಯರ ಮುಷ್ಕರ
ಪುತ್ತೂರು, ನ. 1: ಬೆಳಗಾವಿಯಲ್ಲಿ ನಡೆಯಲಿರುವ ರಾಜ್ಯ ವಿಧಾನಮಂಡಲದ ಅಧಿವೇಶನದಲ್ಲಿ ರಾಜ್ಯ ಸರ್ಕಾರವು ಮಂಡಿಸಲುದ್ದೇಶಿಸಿರುವ ಕರ್ನಾಟಕ ಪ್ರವೈಟ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ (ಕೆಪಿಎಂಇ) ಮಸೂದೆಯನ್ನು ವಿರೋಧಿಸಿ ನ. 3ರಂದು ಮುಂಜಾನೆ ಆರು ಗಂಟೆಯಿಂದ 4ರಂದು ಮುಂಜಾನೆ 6 ಗಂಟೆಯವರೆಗೆ ಖಾಸಗಿ ಆಸ್ಪತ್ರೆಗಳನ್ನು ಬಂದ್ ಮಾಡಿ ಮುಷ್ಕರ ನಡೆಸಲಾಗುವುದು ಎಂದು ಪುತ್ತೂರಿನ ವೈದ್ಯರು ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಂಡಿಯನ್ ಮೆಡಿಕಲ್ ಎಸೋಸಿಯೇಶನ್‌ನ ಪುತ್ತೂರು ಶಾಖೆಯ ಅಧ್ಯಕ್ಷ ಡಾ. ಗಣೇಶ್ ಪ್ರಸಾದ್ ಮುದ್ರಜೆ ಮತ್ತು ಪುತ್ತೂರು ತಾಲೂಕು ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷ ಡಾ.ಶ್ರೀಪತಿ ರಾವ್ ಅವರು ಈ ಮಸೂದೆ ಮಂಡನೆಯಾದಲ್ಲಿ ಖಾಸಗಿ ವೈದ್ಯಕೀಯ ರಂಗದ ಮೇಲೆ ಬಹುದೊಡ್ಡ ಹೊಡೆತ ಬೀಳಲಿದೆ. ವೈದ್ಯರು ಭಯದ ನೆರಳಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿ ಬರಲಿದೆ. ಮಸೂದೆ ಮಂಡನೆಯನ್ನು ವಿರೋಧಿಸಿ ಇಡೀ ರಾಜ್ಯದಲ್ಲಿ ಈ 24 ಗಂಟೆಯ ಮುಷ್ಕರ ನಡೆಯಲಿದ್ದು, ಅದರಂತೆ ಪುತ್ತೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮುಷ್ಕರ ನಡೆಯಲಿದೆ. 24 ಗಂಟೆಗಳ ಅವಧಿಯಲ್ಲಿ ತಾಲೂಕಿನಲ್ಲಿ ಯಾವುದೇ ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು ಕಾರ್ಯ ನಿರ್ವಹಿಸುವುದಿಲ್ಲ. ಈ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳನ್ನು ಹೊರತು ಪಡಿಸಿ ಬೇರೆ ಯಾರಿಗೂ ಚಿಕಿತ್ಸೆ ನೀಡಲಾಗುವುದಿಲ್ಲ. ಒಂದು ದಿನದ ಮಟ್ಟಿಗೆ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗಳನ್ನು ಅವಲಂಬಿಸಬೇಕಾಗುತ್ತದೆ. ಮಾನವೀಯ ದೃಷ್ಟಿಯಿಂದ ಖಾಸಗಿ ವೈದ್ಯರು ಒಂದು ಕಾರ್ಯಪಡೆ ರಚಿಸಿಕೊಂಡಿದ್ದು, ಸರ್ಕಾರಿ ಆಸ್ಪತ್ರೆಯಿಂದ ತುರ್ತು ಬುಲಾವ್ ಬಂದಲ್ಲಿ ಅಲ್ಲಿಗೆ ಈ ಕಾರ್ಯಪಡೆಯ ವೈದ್ಯರು ಹೋಗಿ ಚಿಕಿತ್ಸೆ ನೀಡಲಿದ್ದಾರೆ ಎಂದರು.
ಕೆಲವು ತಿಂಗಳುಗಳ ಹಿಂದೆ ಈ ಮಸೂದೆ ವಿರೋಧಿಸಿ ಒಂದು ದಿನದ ಮುಷ್ಕರ ನಡೆಸಿದ್ದೆವು. ಬೆಂಗಳೂರಿನಲ್ಲೂ ದೊಡ್ಡಮಟ್ಟದ ಪ್ರತಿಭಟನೆ ನಡೆಸಲಾಗಿತ್ತು. ಇದರಿಂದ ಎಚ್ಚೆತ್ತುಕೊಂಡ ಸರ್ಕಾರ ಕರಡು ಮಸೂದೆಯ ಪರಿಶೀಲನೆಗೆ ಸದನದ ಜಂಟಿ ಸಮಿತಿ ರಚನೆ ಮಾಡಿತ್ತು. ಇದಾದ ಬಳಿಕವಾದರೂ ನಮ್ಮ ಬೇಡಿಕೆಗಳನ್ನು ಪರಿಗಣಿಸಬಹುದು ಎಂದು ಭಾವಿಸಿದ್ದೆವು. ಆದರೆ ಈ ಸಮಿತಿಯ ಮುಂದೆ ನಮ್ಮ ಸಂಘದ ರಾಜ್ಯ ಶಾಖೆಯ ಅಭಿಪ್ರಾಯ ಮಂಡಿಸುವುದಕ್ಕೂ ಅವಕಾಶ ನೀಡಲಿಲ್ಲ. ಕೊನೆಗೂ ಸದನ ಸಮಿತಿ ಅತ್ಯಂತ ಕಠಿಣವಾದ ಮಸೂದೆಯನ್ನೇ ಸಿದ್ಧಪಡಿಸಿದೆ. ಇದನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ಮುಂದಾಗಿದೆ. ಈ ಕಾನೂನು ಜಾರಿಗೆ ಬಂದರೆ ಖಾಸಗಿ ವೈದ್ಯರು ತಮ್ಮ ವೃತ್ತಿಗೆ ವಿದಾಯ ಹೇಳಬೇಕಾಗಬಹುದು ಎಂದರು.
2010ರಲ್ಲಿ ಜಾರಿಗೆ ಬಂದ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮವನ್ನು ಇನ್ನಷ್ಟು ಬಿಗಿಗೊಳೊಸುವ ಉದ್ದೇಶದಿಂದ ಸರಕಾರ ನ್ಯಾಯಮೂರ್ತಿ ವಿಕ್ರಂ ಜಿತ್ ಸೇನ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತ್ತು. ಈ ಸಮಿತಿ ವರದಿ ನೀಡಿದ್ದರೂ ಈಗ ಕರಡು ಮಸೂದೆಯಲ್ಲಿ ಅದರ ಅಂಶಗಳನ್ನು ಪರಿಗಣಿಸಿಲ್ಲ. 2010ರಲ್ಲಿ ಆಗಿನ ಕೇಂದ್ರ ಸರ್ಕಾರ ಕ್ಲಿನಿಕಲ್ ಎಸ್ಟಾಬ್ಲಿಷ್‌ಮೆಂಟ್ ಆ್ಯಕ್ಟ್ ಜಾರಿಗೆ ತಂದಿತ್ತು. ಸರ್ಕಾರಿ ಆಸ್ಪತ್ರೆಗಳನ್ನು ಕೂಡ ಈ ಕಾಯ್ದೆಗೆ ಒಳಪಡಿಸಲಾಗಿತ್ತು. ಆದರೆ ಇದನ್ನು ರಾಜ್ಯದಲ್ಲಿ ಜಾರಿಗೊಳಿಸಿಲ್ಲ. ಬದಲಾಗಿ ಈಗ ಸರ್ಕಾರಿ ಆಸ್ಪತ್ರೆಗಳನ್ನು ಹೊರಗಿಟ್ಟು ಕೇವಲ ಖಾಸಗಿ ಆಸ್ಪತ್ರೆಗಳನ್ನು ಮಾತ್ರ ಗುರಿಯಾಗಿಸಿ ಕಠಿಣ ಕಾಯಿದೆ ಜಾರಿಗೊಳಿಸಲು ಮುಂದಾಗಿದೆ, ಇದು ಸರಿಯಲ್ಲ ಎಂದರು.
ಚಿಕಿತ್ಸೆಯ ವೈಫಲ್ಯ, ವೆಚ್ಚಗಳ ಏರುಪೇರು, ರೋಗಿಯ ಆರೋಗ್ಯದಲ್ಲಿ ಏರಿಳಿತ ಇವೆಲ್ಲ ವೈದ್ಯರು ಉದ್ದೇಶಪೂರ್ವಕವಾಗಿ ಮಾಡುವಂಥದ್ದಲ್ಲ. ಆದರೆ ಈ ಪ್ರಮಾದಕ್ಕೆ ಜೈಲು ಸಜೆಯಂಥ ಕಠಿಣ ಶಿಕ್ಷೆಯನ್ನು ಕಾಯಿದೆಯಲ್ಲಿ ಪ್ರಸ್ತಾಪಿಸಲಾಗಿದೆ. ಚಿಕಿತ್ಸೆಯಲ್ಲಿ ಆಕಸ್ಮಾತ್ ಏನಾದರೂ ಏರುಪೇರಾದರೂ ಅದಕ್ಕೆ ವೈದ್ಯ ಜೈಲಿಗೆ ಹೋಗಬೇಕೆಂದು ಹೇಳುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ರಾಜ್ಯ ಸಂಘದ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ರವೀಂದ್ರ , ಭಾರತೀಯ ದಂತ ವೈದ್ಯಕೀಯ ಸಂಘದ ಪುತ್ತೂರು ಶಾಖೆಯ ಅಧ್ಯಕ್ಷ ಡಾ.ಶಿವಾನಂದ್, ಆಯುಷ್ ವೈದ್ಯರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ. ನಾರಾಯಣ ಆಸ್ರ ಉಪಸ್ಥಿತರಿದ್ದರು.