ರಹಸ್ಯವಾಗಿ ನಡೆಯಿತು ಬಾಲಕಿ ಶೆರಿನ್ ಅಂತ್ಯ ಸಂಸ್ಕಾರ
ಹ್ಯೂಸ್ಟನ್ (ಅಮೆರಿಕ), ನ. 1: ಕಳೆದ ತಿಂಗಳು ಅಮೆರಿಕದ ಡಲ್ಲಾಸ್‌ನ ಚರಂಡಿಯೊಂದರಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮೂರು ವರ್ಷದ ಭಾರತೀಯ ಮಗು ಶೆರಿನ್ ಮ್ಯಾಥ್ಯೂಸ್‌ಳ ಅಂತ್ಯ ಸಂಸ್ಕಾರವನ್ನು ಖಾಸಗಿಯಾಗಿ ನಡೆಸಲಾಗಿದೆ ಎಂದು ಕುಟುಂಬದ ಅಟಾರ್ನಿಗಳು ಬುಧವಾರ ಹೇಳಿದ್ದಾರೆ.
ಶೆರಿನ್ ಅಕ್ಟೋಬರ್ 7ರಂದು ಮುಂಜಾನೆ 3 ಗಂಟೆಗೆ ಮನೆಯ ಸಮೀಪದಿಂದ ನಾಪತ್ತೆಯಾಗಿದ್ದಾಳೆ ಎಂಬುದಾಗಿ ಬಾಲಕಿಯ ದತ್ತು ತಂದೆ ವೆಸ್ಲಿ ಮ್ಯಾಥ್ಯೂಸ್ ಪೊಲೀಸರಿಗೆ ದೂರು ನೀಡಿದ್ದನು. ಬಳಿಕ, ಅಕ್ಟೋಬರ್ 22ರಂದು ಉಪನಗರ ಡಲ್ಲಾಸ್‌ನಲ್ಲಿರುವ ಅವರ ಮನೆಯಿಂದ ಸುಮಾರು 1 ಕಿ.ಮೀ. ದೂರದಲ್ಲಿರುವ ಚರಂಡಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿತ್ತು.
ಡಲ್ಲಾಸ್ ಮೆಡಿಕಲ್ ಎಕ್ಸಾಮಿನರ್ ಶೆರೀನ್‌ಳ ದೇಹವನ್ನು ಅಂತ್ಯ ಸಂಸ್ಕಾರಕ್ಕಾಗಿ ಬಿಡುಗಡೆಗೊಳಿಸಿದ್ದು, ಶವಪರೀಕ್ಷೆ ವರದಿ ಇನ್ನಷ್ಟೇ ಕೈಸೇರಬೇಕಾಗಿದೆ.
ಬಾಲಕಿಯನ್ನು ಕಳೆದ ವರ್ಷ ಭಾರತ ಮೂಲದ ದಂಪತಿ ವೆಸ್ಲಿ ಮ್ಯಾಥ್ಯೂಸ್ ಮತ್ತು ಸಿನಿ ಮ್ಯಾಥ್ಯೂಸ್ ಪಾಟ್ನಾದ ಅನಾಥಾಶ್ರಮವೊಂದರಿಂದ ಕಳೆದ ವರ್ಷ ದತ್ತು ಸ್ವೀಕರಿಸಿದ್ದರು.
ಶವ ಸಂಸ್ಕಾರ ನಡೆದ ಸ್ಥಳವನ್ನು ರಹಸ್ಯವಾಗಿಡಲಾಗಿದೆ ಎಂದು ವಕೀಲರು ಹೇಳಿದರು. ಈ ಕಾರ್ಯಕ್ರಮದಲ್ಲಿ ದತ್ತು ತಾಯಿ ಸಿನಿ ಮ್ಯಾಥ್ಯೂಸ್ ಆಪ್ತ ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಭಾಗವಹಿಸಿದರು ಎನ್ನುವುದನ್ನು ಅವರು ಖಚಿತಪಡಿಸಿದರು.
‘‘ಈ ಪ್ರಕರಣಕ್ಕೆ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳು ಅತಿ ಹೆಚ್ಚು ಗಮನ ನೀಡಿರುವ ಹಿನ್ನೆಲೆಯಲ್ಲಿ ಅಂತ್ಯ ಸಂಸ್ಕಾರವನ್ನು ಖಾಸಗಿಯಾಗಿ ನಡೆಸಲು ಕುಟುಂಬ ತೀರ್ಮಾನಿಸಿತು ಎಂದು ವಕೀಲರು ತಿಳಿಸಿದರು.