ಉಡುಪಿ: ರಾಜ್ಯ ಸರಕಾರದ ಹೊಸ ಮಸೂದೆ ವಿರೋಧಿಸಿ ನ.3 ಖಾಸಗಿ ವೈದ್ಯರಿಂದ ಸಂಪೂರ್ಣ ಬಂದ್
ಉಡುಪಿ, ನ.1: ಕರ್ನಾಟಕ ಸರಕಾರ ವೈದ್ಯರುಗಳ ಮೇಲೆ ಹೇರಲಿಚ್ಛಿಸಿರುವ ‘ಕರ್ನಾಟಕ ಖಾಸಗೀ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆ’ಯನ್ನು ವಿರೋಧಿಸಿ ರಾಜ್ಯಾದ್ಯಂತ ಭಾರತೀಯ ವೈದ್ಯಕೀಯ ಸಂಘದ ಸದಸ್ಯರು (ಐಎಂಎ) ನ.3ರ ಬೆಳಗ್ಗೆ 6 ಗಂಟೆಯಿಂದ ನ.4ರ ಬೆಳಗ್ಗೆ 6ಗಂಟೆವರೆಗೆ 24 ಗಂಟೆಗಳ ಸಂಪೂರ್ಣ ಬಂದ್ ಮಾಡಿ ಪ್ರತಿಭಟಿಸಲಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದ ಉಡುಪಿ ಕರಾವಳಿ ಶಾಖೆಯ ಅಧ್ಯಕ್ಷ ಡಾ.ವೈ. ಸುದರ್ಶನ್ ರಾವ್ ಅವರು ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಈ ಅವಧಿಯಲ್ಲಿ ಐಎಂಎಯ ಎಲ್ಲಾ ಸದಸ್ಯರು ಹಾಗೂ ಖಾಸಗೀ ವೈದ್ಯಕೀಯ ಸಂಸ್ಥೆಗಳು ತಮ್ಮ ಸಂಸ್ಥೆಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಿ ಪ್ರತಿಭಟನೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಮಣಿಪಾಲದ ಕೆಎಂಸಿಯೂ ಸೇರಿದಂತೆ ಎಲ್ಲಾ ಖಾಸಗಿ ಆಸ್ಪತ್ರೆಗಳು ಮುಚ್ಚಿದ್ದು, ಯಾವುದೇ ಸೇವೆಯನ್ನು ನೀಡುವುದಿಲ್ಲ. ಕೇವಲ ಮಣಿಪಾಲ ಕೆಎಂಸಿಯಲ್ಲಿ ಮಾತ್ರ ತುರ್ತು ಚಿಕಿತ್ಸೆ ಲಭ್ಯವಿರುತ್ತದೆ ಎಂದವರು ಹೇಳಿದರು.
ಆಯುರ್ವೇದ ವೈದ್ಯರು ಹಾಗೂ ಮೆಡಿಕಲ್ ಶಾಪ್‌ಗಳನ್ನು ಸಹ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮನ ಒಲಿಸುವ ಪ್ರಕ್ರಿಯೆ ನಡೆದಿದೆ. ಉಳಿದಂತೆ 24ಗಂಟೆಗಳ ಕಾಲ ಹೊರರೋಗಿ ವಿಭಾಗ, ಒಳರೋಗಿ ವಿಭಾಗ ಸೇರಿದಂತೆ ಎಲ್ಲಾ ಸೇವೆಗಳು ರದ್ದಾಗಲಿದೆ ಎಂದರು.
ಈ ಮಸೂದೆಯ ಕರಾಳಮುಖವನ್ನು ಪರಿಚಯಿಸಲು ನ.3ರಂದು ಬೆಳಗ್ಗೆ 10 ಗಂಟೆಗೆ ಅಜ್ಜರಕಾಡಿನಲ್ಲಿರುವ ಐಎಂಎ ಭವನದಲ್ಲಿ ಮಸೂದೆಯ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆ ಬಳಿಕ ಸಂಘದ ನಿಯೋಗವೊಂದು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಅರ್ಪಿಸಲಿದೆ ಎಂದರು.
ಒಂದು ದಿನದ ತಾತ್ಕಾಲಿಕ ಪ್ರತಿಭಟನೆಗೆ ಸರಕಾರ ಯಾವುದೇ ಸ್ಪಂದನೆ ನೀಡದಿದ್ದರೆ, ನ.10ರ ನಂತರ ಖಾಸಗಿ ವೈದ್ಯರು ತಮ್ಮ ವೈದ್ಯಕೀಯ ವೃತ್ತಿಗೆ ವಿದಾಯ ಹೇಳುವ ನಿರ್ಧಾರಕ್ಕೆ ಅನಿವಾರ್ಯವಾಗಿ ಬರಬೇಕಾಗುತ್ತದೆ ಎಂದು ಡಾ.ರಾವ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಡಾ.ಕೆ.ಸುರೇಶ್ ಶೆಣೈ ಉಪಸ್ಥಿತರಿದ್ದರು.