ಉಡುಪಿ ಆರ್ಟ್ ಗ್ಯಾಲರಿ ನ.2ರಂದು ಉದ್ಘಾಟನೆ
ಉಡುಪಿ, ನ.1: ಉಡುಪಿಯ ಕಲಾವಿದ ವಸಂತ ರಾವ್ ಅವರ ನೂತನ ಗ್ಯಾಲರಿ ‘ಉಡುಪಿ ಆರ್ಟ್ ಗ್ಯಾಲರಿ’ ಹಾಗೂ ಅವರ ಹೊಸ ಸರಣಿಯ ವರ್ಣಚಿತ್ರಗಳ ಪ್ರದರ್ಶನ ‘ಕಲರ್ಸ್ ಆಫ್ ಗ್ರಾಟಿಟ್ಯುಡ್’ನ ಉದ್ಘಾಟನೆ ನ.2ರಂದು ಬ್ರಹ್ಮಗಿರಿಯ ಸರ್ಕಲ್ ಬಳಿ ನಡೆಯಲಿದೆ.
ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವಸಂತ್ ರಾವ್, ಕಳೆದ ನಾಲ್ಕು ವರ್ಷಗಳಿಂದ ಆಸ್ಟ್ರೇಲಿಯದ ಸಿಡ್ನಿಯಲ್ಲಿ ಡಿಪ್ಲೋಮಾ ಇನ್ ಆರ್ಟ್ ಪೂರ್ಣಗೊಳಿಸಿ ಇದೀಗ ತಾಯ್ನೋಡಿಗೆ ಮರಳಿರುವುದಾಗಿ ತಿಳಿಸಿದರು. ವಿಶ್ವ ಚಿತ್ರಕಲೆಯ ಕುರಿತ ಪಡೆದ ಹೊಸ ಅನುಭವದೊಂದಿಗೆ ಭಾರತೀಯ ಚಿತ್ರಕಲೆಯನ್ನು ಹೊಸ ದೃಷ್ಟಿಕೋನದಿಂದ ಅಭ್ಯಸಿಸಲು ತನಗೆ ಈ ಅವಧಿಯಲ್ಲಿ ಸಾಧ್ಯವಾಗಿದೆ ಎಂದರು.
ವಿದೇಶಗಳಲ್ಲಿ ಹಲವು ಚಿತ್ರಕಲಾ ಪ್ರದರ್ಶನಗಳನ್ನು ವೀಕ್ಷಿಸಿ, ವಿಶ್ವ ವಿಖ್ಯಾತ ಮ್ಯೂಸಿಯಂಗಳಿಗೆ ಭೇಟಿ ನೀಡಿ, ತನ್ನ ಅನುಭವವನ್ನು ವಿಸ್ತರಿಸಿಕೊಂಡಿರು ವುದಾಗಿ ತಿಳಿಸಿದರು. ಇತ್ತೀಚಿಗೆ ರಚಿಸಿರುವ 200 ಕಲಾಕೃತಿಗಳಲ್ಲಿ ಸುಮಾರು 50 ಕಲಾಕೃತಿಗಳನ್ನು ‘ಕಲರ್ಸ್ ಆಫ್ ಗ್ರಾಟಿಟ್ಯುಡ್’ನಲ್ಲಿ ಪ್ರದರ್ಶಿಸಿರುವುದಾಗಿ ತಿಳಿಸಿದರು.
ಗ್ಯಾಲರಿಯನ್ನು ಪರ್ಯಾಯ ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದು, ಉಡುಪಿ ಚಿತ್ರಕಲಾ ಮಂದಿರದ ನಿರ್ದೇಶಕ ಡಾ.ಯು.ಸಿ.ನಿರಂಜನ ಹಾಗೂ ಉದ್ಯಮಿ ಶಶಿಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಚಿತ್ರಕಲಾ ಪ್ರದರ್ಶನವು ಪ್ರತಿದಿನ ಬೆಳಗ್ಗೆ 11 ರಿಂದ ಸಂಜೆ 6 ಗಂಟೆಯ ವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುತ್ತದೆ ಎಂದರು.