ಸಿಪಿಎಂ ಹಿರಿಯ ಸದಸ್ಯ ರಾಜೆಂದ್ರ ಅತ್ತಾವರ ನಿಧನ
ಮಂಗಳೂರು, ನ. 1: ಸಿಪಿಎಂ ಪಕ್ಷದ ಹಿರಿಯ ಸದಸ್ಯ ರಾಜೇಂದ್ರ ಅತ್ತಾವರ (63) ಅನಾರೋಗ್ಯದಿಂದಾಗಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ನಿಧನ ಹೊಂದಿದರು.
ಎಳೆಯ ಪ್ರಾಯದಲ್ಲೇ ಕಮ್ಯೂನಿಸ್ಟ್ ಚಳುವಳಿಯಿಂದ ಆಕರ್ಷಿತಗೊಂಡು, ಅಂದಿನ ಸಿಪಿಎಂ ಜಿಲ್ಲಾ ಮುಖಂಡ ಬಿ. ನಾರಾಯಣ ಅವರ ಮೊದಲ ಪುತ್ರರಾದ ರಾಜೇಂದ್ರ ಅವರು ರೈತ ಕಾರ್ಮಿಕರ ಹಲವಾರು ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಬಡವರ, ಶೋಷಿತರ ಪರವಾಗಿ ಅತೀವ ಕಾಳಜಿ ಹೊಂದಿದ್ದ ರಾಜೇಂದ್ರರವರು ತನ್ನ ಕೊನೆಯ ಉಸಿರು ಇರುವವರೆಗೂ ಕಮ್ಯೂನಿಸ್ಟ್ ಪಕ್ಷದ ಸಿದ್ಧಾಂತದ ಬಗ್ಗೆ ಬಾರೀ ಗೌರವವನ್ನು ಹೊಂದಿದ್ದರು. ಅತ್ತಾವರ ಪ್ರದೇಶದಲ್ಲಿ ಪಕ್ಷದ ಬೆಳವಣಿಗೆಗೆ ಕಾರಣೀಕರ್ತರಾಗಿದ್ದರು.
ಅವರ ನಿಧನಕ್ಕೆ ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮಿತಿ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಅವರ ನಿಧನವು ಮಂಗಳೂರು ನಗರದ ದುಡಿಯುವ ವರ್ಗದ ಚಳುವಳಿಗೆ ಬಾರೀ ನಷ್ಟವುಂಟಾಗಿದೆ ಎಂದು ಸಿಪಿಎಂ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದೆ.
ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯಲ್ಲಿ ಸಿಪಿಎಂ ಮಂಗಳೂರು ನಗರ ದಕ್ಷಿಣ ಮುಖಂಡ ಸುನಿಲ್ ಕುಮಾರ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ಸುರೇಶ್ ಬಜಾಲ್, ನಾಗೇಶ್ ಕೋಟ್ಯಾನ್ ಅವರು ಭಾಗವಹಿಸಿದ್ದರು.