ಗಾಂಜಾ ಮಾರಾಟಕ್ಕೆ ಯತ್ನ: ಓರ್ವನ ಬಂಧನ
ಮಂಗಳೂರು, ನ. 2: ಸಾರ್ವಜನಿಕ ಹಾಗೂ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಲು ನಗರದ ಸಬ್ ಜೈಲ್ ಬಳಿ ಗಿರಾಕಿಗಳಿಗಾಗಿ ಕಾಯುತ್ತಿದ್ದ ಎನ್ನಲಾದ ಆರೋಪಿಯೋರ್ವನನ್ನು ಬರ್ಕೆ ಠಾಣಾ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಕಾಸರಗೋಡು ಅಟ್ಟೆಗೋಳಿ ಬಳಿಯ ಮಂಜತ್ತಾಡಿ ಹೌಸ್ ನಿವಾಸಿ ಕಿರಣ್ ಟಿ. (25) ಬಂಧಿತ ಆರೋಪಿ. ನಗರದ ಸಬ್ ಜೈಲ್ ಬಳಿ ಗಾಂಜಾವನ್ನಿಟ್ಟುಕೊಂಡು ಗಿರಾಕಿಗಳಿಗಾಗಿ ಕಾಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಕಿರಣ್‌ನನ್ನು ಬಂಧಿಸಿದ್ದಾರೆ.
ಬಂಧಿತನಿಂದ 300 ಗ್ರಾಂ ತೂಕದ ಸುಮಾರು 14 ಸಾವಿರ ರೂ. ಮೌಲ್ಯದ ಗಾಂಜಾ ಹಾಗೂ ಒಂದು ಮೊಬೈಲ್ ಫೋನ್‌ನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮಂಗಳೂರು ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಉದಯ ನಾಯಕ್ ಅವರ ಮಾರ್ಗದರ್ಶನದಲ್ಲಿ ಬರ್ಕೆ ಪೊಲೀಸ್ ಠಾಣಾ ನಿರೀಕ್ಷಕ ರಾಮಕೃಷ್ಣ ಕೆ.ಕೆ. ಮತ್ತು ಪಿಎಸ್‌ಐ ನರೇಂದ್ರ ಮತ್ತು ಎಎಸ್‌ಐ ಕಿಶೋರ್, ಸಿಬ್ಬಂದಿ ಪ್ರಕಾಶ್, ಗಣೇಶ್, ನಾಗರಾಜ್, ಕೇಂದ್ರ ಉಪವಿಭಾಗದ ರೌಡಿ ನಿಗ್ರದ ದಳದ ಪೊಲೀಸ್ ನಿರೀಕ್ಷಕ ರವೀಶ್ ನಾಯಕ್ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದಾರೆ.