ಗುರುಹಿರಿಯರನ್ನು ಗೌರವಿಸುವ ಮನೋಭಾವ ಮೈಗೂಡಿಸಿಕೊಳ್ಳಿ- ಶಕುಂತಳಾ ಶೆಟ್ಟಿ
ಪುತ್ತೂರು, ನ.2: ಮಕ್ಕಳು ಶಿಕ್ಷಣ, ಕಲೆ, ಕ್ರೀಡೆಗಳಲ್ಲಿ ಆಸಕ್ತಿಯನ್ನು ಬೆಳೆಸುವುದರೊಂದಿಗೆ ಗುರು, ಹಿರಿಯರನ್ನು ಗೌರವಿಸುವ ಮನೋಭಾವ ಮೈಗೂಡಿಸಿಕೊಳ್ಳಬೇಕು ಎಂದು ಶಾಸಕಿ ಶಕುಂತಳಾ ಟಿ ಶೆಟ್ಟಿ ಹೇಳಿದರು.
ಅವರು ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬೆಂಗಳೂರು, ತಾಲೂಕು ಬಾಲಭವನ ಸಮಿತಿ ಹಾಗೂ ಶಿಶು ಅಭಿವೃದ್ಧಿ ಇಲಾಖೆ ಪುತ್ತೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಗುರುವಾರ ಪುತ್ತೂರಿನ ಪರ್ಲಡ್ಕ ಡಾ. ಶಿವರಾಮ ಕಾರಾಂತ ಬಾಲವನದಲ್ಲಿ ನಡೆದ ತಾಲೂಕು ಮಟ್ಟದ ಮಕ್ಕಳ ‘ಕಲಾಶ್ರಿ ಪ್ರಶಸ್ತಿ’ ಆಯ್ಕೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದೆಲ್ಲಾ ಶಿಕ್ಷಣಕ್ಕೆ ಯಾವುದೇ ತರದ ಸಹಕಾರ, ಪ್ರೋತ್ಸಾಹಗಳು ದೊರೆಯುತ್ತಿರಲಿಲ್ಲ. ಆದರೆ ಇಂದು ಸರಕಾರದ ವತಿಯಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಪೂರಕವಾದ ಪ್ರೋತ್ಸಾಹಗಳು ದೊರೆಯುತ್ತಿದೆ. ಸ್ಪೋಕನ್ ಇಂಗ್ಲೀಷ್ ತರಗತಿ, ಕರಾಟೆ ತರಬೇತಿ, ಪ್ರತಿಭೆಗಳಿಗೆ ಪ್ರಶಸ್ತಿ ಮೊದಲಾದಂತಹ ಸಹಕಾರ, ಪ್ರೋತ್ಸಾಹಗಳು ಸರಕಾರದಿಂದಲೇ ದೊರೆಯುತ್ತಿದ್ದು, ಇಂದಿನ ಮಕ್ಕಳೇ ಭಾಗ್ಯವಂತರು ಎಂದರು.
ಕಲಾಶ್ರೀ ಪ್ರಶಸ್ತಿಯ ಆಯ್ಕೆಯಲ್ಲಿ ತೀರ್ಪಗಾರರು ಪ್ರಾಮಾಣಿಕ ತೀರ್ಪ ನೀಡುತ್ತಿದ್ದಾರೆ. ಕಳೆದ ಅವಧಿಯಲ್ಲಿ ಪುತ್ತೂರಿನ ಮಕ್ಕಳು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ತಾ.ಪಂ ಅಧ್ಯಕ್ಷ ಭವಾನಿ ಚಿದಾನಂದ ಮಾತನಾಡಿ ಕಲಾಶ್ರೀ ಪ್ರಶಸ್ತಿಗೆ ಆಯ್ಕೆಯ ಮೂಲಕ ಹಲವು ಪ್ರತಿಭೆಗಳ ಅನಾವವಣಗೊಳಿಸುವ ವೇದಿಕೆಯಾಗಲಿದೆ. ಪ್ರತಿಭೆಳು ಬೆಳೆಯಲು ಶಿಕ್ಷಕರ ಜೊತೆಗೆ ಪೋಷಕರ ಸಹಕಾರವು ಬಹುಮುಖ್ಯವಾಗಿದೆ. ತಾಲೂಕಿನಿಂದ ಆಯ್ಕೆಯಾಗುವ ಪ್ರತಿಭೆಗಳು ಜಿಲ್ಲೆ, ರಾಜ್ಯ ಮಟ್ಟದಲ್ಲಿ ಮಿಂಚಿ ಬರಲಿ ಎಂದು ಶುಭಹಾರೈಸಿದರು.
ತಾಲೂಕು ಬಾಲಭವನ ಸಮಿತಿ ಸದಸ್ಯೆ ಗೌರಿ ಬನ್ನೂರು, ಅಸಹಾಯಕರ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ನಯನ ರೈ, ಲಯನೆಸ್ ಕ್ಲಬ್ ಅಧ್ಯಕ್ಷೆ ವಾಣಿಕೃಷ್ಣ, ಮಾಜಿ ಅಧ್ಯಕ್ಷೆ ಶಾರದಾ ಕೇಶವ್, ವಿಕಲಚೇತನರ ಹಾಗೂ ಹಿರಿಯ ನಾಗರಿಕ ಕಲ್ಯಾಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಶಿವಪ್ಪ ರಾಥೋಡ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಹೆಗ್ಡೆ ಸ್ವಾಗತಿಸಿದರು. ಅಂಗನವಾಡಿ ಮೇಲ್ವಿಚಾರಕಿ ಹೇಮಾ ರಾಮ್‌ದಾಸ್ ವಂದಿಸಿದರು.