ಪುತ್ತೂರು: ಶ್ರೀ ಕ್ಷೇತ್ರ ಹನುಮಗಿರಿಗೆ ಯಧುವೀರ್ ಒಡೆಯರ್ ಭೇಟಿ
ಪುತ್ತೂರು, ನ.2: ಈಶ್ವರಮಂಗಲದ ಹನುಮಗಿರಿ ಕ್ಷೇತ್ರಕ್ಕೆ ಮೈಸೂರು ಸಂಸ್ಥಾನಮ್‌ನ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಗುರುವಾರ ಭೇಟಿ ನೀಡಿ ಕ್ಷೇತ್ರದಲ್ಲಿರುವ ಪಂಚಮುಖಿ ಆಂಜನೇಯನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬೆಳಗ್ಗೆ 9.30 ಕ್ಕೆ ಕ್ಷೇತ್ರಕ್ಕೆ ಆಗಮಿಸಿದ ಅವರನ್ನು ಕ್ಷೇತ್ರದ ಮಹಾಪೋಷಕರಾದ ಮಹಾಬಲೇಶ್ವರ ಭಟ್ ಗೊನೆತೋಟ ಮತ್ತು ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ್ತಮೂಡೆತ್ತಾಯ ಬರಮಾಡಿಕೊಂಡರು. ಬಳಿಕ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು ಈ ಹಿಂದೆ ಎರಡು ಬಾರಿ ಭೇಟಿ ನೀಡಿದ್ದೆ ಇದು ನನ್ನ ಮೂರನೇ ಭೇಟಿಯಾಗಿದೆ. ಕ್ಷೇತ್ರದ ಭಕ್ತನಾಗಿರುವ ನನಗೆ ಕ್ಷೇತ್ರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಬೇಕು ಎಂಬ ಮನಸ್ಸಾದ ಕಾರಣ ದೇವರು ನನ್ನನ್ನು ಇಲ್ಲಿಗೆ ಕರೆಸಿದ್ದಾನೆ. ಇಲ್ಲಿ ಭೇಟಿ ನೀಡಿದರೆ ನನಗೆ ಸಂತೋಷ ನೆಮ್ಮದಿ ಭಾವ ಉಂಟಾಗುತ್ತದೆ ಎಂದು ಹೇಳಿದರು.
ಬಳಿಕ ಕ್ಷೇತ್ರದಲ್ಲೆಲ್ಲಾ ಸುತ್ತಾಡಿದ ಅವರು ಕೋದಂಡಾರಾಮ ಪ್ರತಿಮೆಗೆ ಹೂ ಸಿಂಚನಗೈದರು. ಹನುಮ ಪ್ರತಿಮೆಗೆ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಹಿಂದೆ ಕ್ಷೇತ್ರಕ್ಕೆ ಭೇಟಿ ನೀಡುವ ವೇಳೆ ಜುಬ್ಬಾದಾರಿಯಾಗಿದ್ದು ಈ ಬಾರಿ ಪಂಚೆ ಧರಿಸಿಕೊಂಡಿದ್ದರು. ಕ್ಷೇತ್ರದ ಭೇಟಿ ಹಿನ್ನೆಲೆಯಲ್ಲಿ ವೃತಾಚರಣೆಯಲ್ಲಿದ್ದ ಅವರು ಪೂಜೆಯ ಬಳಿಕ ಕ್ಷೇತ್ರದಲ್ಲಿ ಉಪಹಾರ ಸೇವಿಸಿದರು. ಸುಮಾರು 11 ಗಂಟೆಯ ವೇಳೆಗೆ ಕ್ಷೇತ್ರದಿಂದ ನಿರ್ಗಮಿಸಿದರು. ಕ್ಷೇತ್ರದ ಆಡಳಿತ ಮಂಡಳಿ ಸದಸ್ಯರಾದ ಶಿವರಾಮ್ ಪಿ, ಟ್ರಸ್ಟಿ ಶಿವರಾಮ ಶರ್ಮ, ನಾಗರಾಜ್ ಇರ್ದೆ ನಡುವಡ್ಕ, ಲೇಖಕ ನಾ. ಕಾರಂತ ಪೆರಾಜೆ, ಉದ್ಯಮಿ ಸಹಜ್ ರೈ ಬಳಜ್ಜ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು. ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ್ತಮೂಡೆತ್ತಾಯವರು ಒಡೆಯರ್ ಅವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬೀಳ್ಕೊಟ್ಟರು.