ಭ್ರಷ್ಟಾಚಾರ ನಿಯಂತ್ರದಲ್ಲಿ ಯುವ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು: ಎಚ್.ಕುಮಾರ್
ಮಂಗಳೂರು, ನ.3: ಭ್ರಷ್ಟಾಚಾರವೆಂಬುದು ಸಮಾಜದಲ್ಲಿ ಆಳವಾಗಿ ಬೇರೂರಿರುವುದರಿಂದ ಅದನ್ನು ನಿಯಂತ್ರಿಸುವಲ್ಲಿ ಯುವ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದಾಗಿದೆ ಎಂದು ಎಂಆರ್‌ಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಎಚ್. ಕುಮಾರ್ ಅಭಿಪ್ರಾಯಿಸಿದ್ದಾರೆ.
ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಹಾಗೂ ಎಂಆರ್‌ಪಿಎಲ್‌ನ ಸಹಯೋಗದಲ್ಲಿ ಸಹ್ಯಾದ್ರಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾದ ಇಂಟರ್ ಪ್ರೊಫೆಶನಲ್ ಕಾಲೇಜಿಯೇಟ್ ಚರ್ಚಾ ಸ್ಪರ್ಧೆ 2017ರ ಸಮಾರೋಪ ಹಾಗೂ ಸಹ್ಯಾದ್ರಿ ಇಂಟೆಗ್ರೆಟಿ ಕ್ಲಬ್‌ನ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿನಿತ್ಯ ನಾವು ಒಂದಲ್ಲಾ ಒಂದು ರೀತಿಯಲ್ಲಿ ಭ್ರಷ್ಟಾಚಾರಕ್ಕೆ ತುತ್ತಾಗುತ್ತಿರುತ್ತೇವೆ. ಈ ವ್ಯವಸ್ಥೆಯಿಂದ ಹೊರಬರಬೇಕಾಗಿದ್ದರೆ ಏಕಾಏಕಿಯಾಗಿ ಯಾವುದೇ ಬದಲಾವಣೆ ಸಾಧ್ಯವಾಗದು. ಬದಲಾಗಿ ಸುಧಾರಣೆಯ ಮಾರ್ಗದ ಮೂಲಕ ಭ್ರಷ್ಟಾಚಾರ ನಿಯಂತ್ರಣ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಇಂಜಿನಿಯರಿಂಗ್, ಮ್ಯಾನೇಜ್‌ಮೆಂಟ್ ಸೇರಿದಂತೆ ಯುವ ವಿದ್ಯಾರ್ಥಿಗಳು ಜಾಗೃತಿ ಮೂಡಿಸುವ ಕಾರ್ಯದೊಂದಿಗೆ ಸಮಾಜದಲ್ಲಿ ಬದಲಾವಣೆ ತರಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಎಂಆರ್‌ಪಿಎಲ್‌ನ ಚೀಫ್ ವಿಜಿಲೆನ್ಸ್ ಅಧಿಕಾರಿ ರಾಜೀವಂ ಕುಶ್ವಾ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಉಮೇಶ್ ಎಂ. ಭೂಶಿ ವಹಿಸಿದ್ದರು. ಎಚ್.ವಿ. ಮಂಜುನಾಥ್ ವಂದಿಸಿದರು. ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು.
‘ನನ್ನ ದೃಷ್ಟಿ- ಭ್ರಷ್ಟಾಚಾರ ಮುಕ್ತ ಭಾರತ’ ಎಂಬ ವಿಷಯದಲ್ಲಿ ನಡೆದ ಚರ್ಚಾ ಸ್ಪರ್ಧೆಯಲ್ಲಿ ನಗರದ 18 ಕಾಲೇಜುಗಳ 36 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಥಮ ಬಹುಮಾನವನ್ನು ಸಹ್ಯಾದ್ರಿ ಕಾಲೇಜು ತಂಡ ಪಡೆದರೆ, ದ್ವಿತೀಯ ಸ್ಥಾನವನ್ನು ಕೆಎಂಸಿ ಮಣಿಪಾಲ ತಂಡ ಹಾಗೂ ತೃತೀಯ ಸ್ಥಾನವನ್ನು ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ತಂಡ ತನ್ನದಾಗಿಸಿಕೊಂಡಿತು. ಇದೇ ವೇಳೆ ಸ್ಪರ್ಧೆಯಲ್ಲಿ ಅತ್ಯುತ್ತಮ ಚರ್ಚಾ ಪಟುವಾಗಿ ಸೈಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಚೈತ್ರಾ ಅವರಿಗೆ ಬಹುಮಾನ ನೀಡಲಾಯಿತು.
ಬೆಳಗ್ಗೆ ಆರಂಭಗೊಂಡ ಚರ್ಚಾ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಎಂಆರ್‌ಪಿಎಲ್‌ನ ಜನರಲ್ ಮ್ಯಾನೇಜರ್ (ವಿಜಿಲೆನ್ಸ್) ಕೆ. ಉಪೇಂದ್ರ ರಾವ್ ಭಾಗವಹಿಸಿದ್ದರು.