×
Ad

ಜಾಗೃತ ಸಮಾಜದಿಂದ ಭ್ರಷ್ಟಾಚಾರಕ್ಕೆ ತಡೆ: ವೆಂಕಟೇಶ್ ನಾಯ್ಕೆ

Update: 2017-11-02 21:35 IST

ಉಡುಪಿ, ನ.2: ಸಾರ್ವಜನಿಕರಿಗೆ ನ್ಯಾಯಬದ್ಧ ಸೇವೆ ದೊರೆಯಬೇಕಾದರೆ ಭ್ರಷ್ಟಾಚಾರದಂತಹ ಅನಿಷ್ಟವನ್ನು ಹೋಗಲಾಡಿಸಬೇಕು. ಇದಕ್ಕೆ ಸರಕಾರಿ ನೌಕರರು ಹಾಗೂ ಸಾರ್ವಜನಿಕ ಅಧಿಕಾರಿಗಳು ಮಾಡುವ ಕೆಲಸಕ್ಕೆ ಮೀರಿ ವೇತನ ಬಯಸದೇ ಕರ್ತವ್ಯವನ್ನು ನಿರ್ವಹಿಸಬೇಕೆಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ವೆಂಕಟೇಶ್ ನಾಯ್ಕ ಟಿ. ಹೇಳಿದ್ದಾರೆ.

ಗುರುವಾರ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಉಡುಪಿ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಭ್ರಷ್ಟಾಚಾರ ನಿಗ್ರಹ ದಳ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಭ್ರಷ್ಟಾಚಾರ ವಿರುದ್ಧ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಭ್ರಷ್ಟಾಚಾರಕ್ಕೆ ಹಲವು ಮುಖಗಳಿದ್ದು, ಸರಕಾರಿ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ಸಾಕಷ್ಟು ಕಾನೂನುಗಳನ್ನು ರೂಪಿಸಲಾಗಿದೆ. ಕಾನೂನು ಅನುಷ್ಠಾನಕ್ಕೆ ಎಲ್ಲರ ಸಹಕಾರ ಅಗತ್ಯವಿದ್ದು, ಕಠಿಣ ಶಿಕ್ಷೆ ಜೊತೆಗೆ ಜಾಗೃತಿಯೂ ಅತ್ಯಗತ್ಯ ಎಂದರು. ಈ ಸಂಬಂಧ ರೂಪಿಸಿರುವ ಕಾನೂನುಗಳ ಬಗ್ಗೆ ನ್ಯಾಯಾಧೀಶರು ಸವಿವರ ಮಾಹಿತಿಗಳನ್ನು ನೀಡಿದರು.

ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಸಾರ್ವಜನಿಕರ ಸೇವೆಗಾಗಿ ಮಾಡುವ ಕರ್ತವ್ಯದಲ್ಲಿ ಪ್ರತಿಫಲ ಬಯಸಿದರೆ ಅದು ಕಾನೂನಿಗೆ ವಿರುದ್ಧ ಹಾಗೂ ಭ್ರಷ್ಟಾಚಾರ ಎನಿಸಿಕೊಳ್ಳುತ್ತದೆ. ಸಾರ್ವಜನಿಕ ಜಾಗೃತಿಯಿಂದ ಮಾತ್ರ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯ. ಲಂಚ ಕೇಳುವುದರ ಜೊತೆಗೆ ಕೊಡುವುದು ಅಪರಾಧ. ಜಾಗೃತ ನಾಗರಿಕರು ಮಾತ್ರ ವ್ಯವಸ್ಥೆಯನ್ನು ಬದಲಿಸಬಹುದು. ಸಕಾಲದಂತಹ ಉತ್ತಮ ಯೋಜನೆಗಳು, ಆನ್‌ಲೈನ್, ಡಿಜಿಟಲೈಸೇಷನ್‌ಗೆ ಒತ್ತು ನೀಡುವುದರಿಂದ ಕರ್ತವ್ಯ ವಿಳಂಬ, ಕಾರಣ ಹೇಳುವುದಕ್ಕೆ ಕಡಿವಾಣ ಬೀಳಲಿದೆ ಎಂದರು.

 ಭ್ರಷ್ಟ್ಟಾಚಾರ ಹುಟ್ಟಿನಿಂದಲೇ ಬರುವುದಿಲ್ಲ. ಇದಕ್ಕೆ ಕಾರಣಗಳು ಹಲವು. ಜನರು ನೆರವಾದರೆ ಮಾತ್ರ ಭ್ರಷ್ಟಾಚಾರ ಕಡಿಮೆಯಾಗಲು ಸಾಧ್ಯ. ಇಂತಹ ಸನ್ನಿವೇಶಗಳು ಕಂಡು ಬಂದರೆ ಪೊಲೀಸ್ ನಿಗ್ರಹ ದಳಕ್ಕೆ ದೂರು ಸಲ್ಲಿಸ ಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಎಂ. ಪಾಟೀಲ್ ಹೇಳಿದರು.

ಸಾಮಾಜಿಕ ಕಾರ್ಯಕರ್ತೆ ಜಯಶ್ರೀ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಎಂಜಿಎಂ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಸಂಧ್ಯಾ ಆರ್. ನಂಬಿಯಾರ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಾಲತಿದೇವಿ, ಹೆಚ್ಚುವರಿ ಎಸ್ಪಿ ಕುಮಾರ್ ಚಂದ್ರ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯ ದರ್ಶಿ ಲತಾ, ವಕೀಲರ ಸಂಘದ ಅಧ್ಯಕ್ಷ ರತ್ನಾಕರ ಶೆಟ್ಟಿ, ಭ್ರಷ್ಟಾಚಾರ ನಿಗ್ರಹ ದಳದ ಅಧೀಕ್ಷಕಿ ಶುೃತಿ ಎನ್.ಎಸ್. ಉಪಸ್ಥಿತರಿದ್ದರು.

ಇದೇ ಸಂದರ್ದಲ್ಲಿ ಪ್ರತಿಜ್ಞಾ ವಿಧಿ ಪ್ರಮಾಣವಚನವನ್ನು ವೆಂಕಟೇಶ್ ನಾಯ್ಕಾ ಟಿ. ಬೋಧಿಸಿದರು. ಸಾರ್ವಜನಿಕ ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಭ್ರಷ್ಟಾಚಾರವನ್ನು ತೊಲಗಿಸಿ ಉತ್ತಮ ಆಡಳಿತಕ್ಕಾಗಿ ಪಾರದರ್ಶಕ ನೀತಿಗಳನ್ನು ರೂಪಿಸಿ, ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅ.30ರಿಂದ ನ.4ರವರೆಗೆ ಜಾಗೃತಿ ಅರಿವು ಸಪ್ತಾಹ ವನ್ನು ಕೇಂದ್ರ ವಿಚಕ್ಷಣಾ ಆಯೋಗ ಹಮ್ಮಿಕೊಂಡಿದೆ. ಈ ವರ್ಷದ ಜಾಗೃತಿ ಅರಿವು ಸಪ್ತಾಹದ ವಿಷಯ ‘ಮೈ ವಿಷನ್- ಕರಪ್ಷನ್ ಫ್ರೀ ಇಂಡಿಯಾ’ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News