ಹಲವು ಸಮಸ್ಯೆಗಳ ಕುರಿತಾಗಿ ಚರ್ಚೆಗೆ ಗ್ರಾಸವಾದ 'ವಿದ್ಯಾರ್ಥಿ ಸಂಪರ್ಕ' ಸಭೆ
ಮಂಗಳೂರು, ನ. 2: ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳ ಪ್ರಮುಖ ಸಮಸ್ಯೆಗಳ ಕುರಿತು ಚರ್ಚಿಸುವ ಸಲುವಾಗಿ ಕರ್ನಾಟಕ ವಿಧಾನ ಪರಿಷತ್ ನ ಸರಕಾರಿ ಮುಖ್ಯ ಸಚೇತಕರಾದ ಐವನ್ ಡಿ'ಸೋಜಾರವರ ನೇತೃತ್ವದಲ್ಲಿ ಎನ್.ಎಸ್.ಯು.ಐ.ವತಿಯಿಂದ "ವಿದ್ಯಾರ್ಥಿ ಸಂಪರ್ಕ" ಸಭೆಯನ್ನು ಐವನ್ ಡಿ'ಸೋಜಾರವರ ಕಚೇರಿಯಲ್ಲಿ ಆಯೋಜಿಸಲಾಗಿತ್ತು.
ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿ ತಮ್ಮ ತಮ್ಮ ಸಮಸ್ಯೆಗಳ ಕುರಿತಾಗಿ ಅಧಿಕಾರಿಗಳ ಗಮನಕ್ಕೆ ತಂದರು. ಪ್ರಮುಖವಾಗಿ ಡ್ರಗ್ಸ್ ದಂಧೆ, ವಿದ್ಯಾರ್ಥಿ ವೇತನದಲ್ಲಿ ಆಗಿರುವ ತಾರತಮ್ಯ, ಬಸ್ ಸಮಸ್ಯೆ, ಸರ್ಕಾರಿ ಹಾಸ್ಟೆಲ್ ಸಮಸ್ಯೆಗಳ ಕುರಿತಾಗಿ ಚರ್ಚಿಸಲಾಯಿತು. ಈ ವೇಳೆ ಮಾತನಾಡಿದ ಐವನ್ ಡಿ'ಸೋಜಾರವರು "ಯುವಕರು ಪ್ರಸ್ತುತ ಮಾದಕ ವ್ಯಸನಕ್ಕೆ ಬಲಿಯಾಗುತ್ತಿರುವುದು ಕಳವಳಕಾರಿಯಾದಂತಹ ವಿಚಾರವಾಗಿದೆ, ಡ್ರಗ್ಸ್ ದಂಧೆಯ ಕುರಿತಾಗಿ ಪೋಲಿಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಅದರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಕುರಿತು ವಿಶೇಷ ಗಮನವನ್ನು ವಹಿಸಲಾಗುವುದು ಇದಕ್ಕೆ ವಿದ್ಯಾರ್ಥಿಗಳ ಸಹಕಾರವು ಮುಖ್ಯ" ಎಂದು ಅವರು ಹೇಳಿದರು. ಅದಲ್ಲದೆ ವಿದ್ಯಾರ್ಥಿಗಳ ಪ್ರಮುಖ ಸಮಸ್ಯೆಗಳ ಕುರಿತಾಗಿ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತರುವುದಾಗಿ ಐವನ್ ಡಿ'ಸೋಜಾರವರು ಭರವಸೆಯನ್ನು ನೀಡಿದರು.
ಸ್ವಾಗತದೊಂದಿಗೆ ಪ್ರಾಸ್ತಾವಿಕವಾಗಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಎನ್.ಎಸ್.ಯು.ಐ.ಉಪಾಧ್ಯಕ್ಷ ಶೌವಾದ್ ಗೂನಡ್ಕರವರು "ವಿದ್ಯಾರ್ಥಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಅಂತಹ ಸಮಸ್ಯೆಗಳ ಕುರಿತಾಗಿ ಅಧಿಕಾರಿಗಳ ಸಮ್ಮುಖದಲ್ಲಿ ವಿದ್ಯಾರ್ಥಿಗಳು ಮುಕ್ತವಾಗಿ ಚರ್ಚಿಸುವ ಸಲುವಾಗಿ ಈ ವಿದ್ಯಾರ್ಥಿ ಸಂಪರ್ಕ ಸಭೆಯನ್ನು ಆಯೋಜಿಸಲಾಗಿದೆ" ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಬಂದರ್ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರಾಮಕೃಷ್ಣ ಕೆ.ಕೆ, ಕೆ.ಎಸ್.ಆರ್.ಟಿ.ಸಿ.ಅಧಿಕಾರಿಗಳಾದ ಆಶಾಲತಾ ಕೆ, ಸ್ವರ್ಣಲತಾ ಎಮ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಹೇಮಚಂದ್ರ, ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ಶ್ರೀಧರ್ ಭಂಡಾರಿ, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಹೇಮಲತಾ ಬಿ.ಎಸ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮಾಹಿತಿ ಅಧಿಕಾರಿ ಅಬ್ದುಲ್ ಖಾದರ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ನಿರ್ದೇಶಕರಾದ ಅಮೃತ್ ಕದ್ರಿಯವರು ಉಪಸ್ಥಿತರಿದ್ದರು.
ಮಾಜಿ ಕಾರ್ಪೋರೇಟರ್ ಕೆ.ಭಾಸ್ಕರ್ ರಾವ್ ವಂದಿಸಿದರು.