ನ.6ರಂದು ಸಂತ ಮದರ್ ತೆರೆಸಾ ನೆನಪಲ್ಲಿ ವಿಚಾರ ಸಂಕಿರಣ
ಮಂಗಳೂರು, ನ.3: ಸಂತ ಮದರ್ ತೆರೆಸಾ ವಿಚಾರ ವೇದಿಕೆಯ ವತಿಯಿಂದ ನ. 6ರಂದು ನಗರದ ಪುರಭವನದಲ್ಲಿ ‘ಸ್ವಾಸ್ಥ ಸಮಾಜಕ್ಕೆ ಮರ್ ತೆರೆಸಾ ಸೇವೆಯ ಅಗತ್ಯತೆ’ ವಿಷಯದಲ್ಲಿ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ಮಾಹಿತಿ ನೀಡಿದ ವೇದಿಕೆಯ ಗೌರವಾಧ್ಯಕ್ಷ ರಾಯ್ ಕ್ಯಾಸ್ತಲಿನೊ, ಅಂದು ಬೆಳಗ್ಗೆ 9.45ಕ್ಕೆ ಹೊಸದಿಲ್ಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯ (ಜೆಎನ್‌ಯು)ದ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥ ಪ್ರೊ. ಪುರುಷೋತ್ತಮ ಬಿಳಿಮಲೆ ವಿಚಾರ ಸಂಕಿರಣವನ್ನು ಉದ್ಘಾಟಿಸಲಿರುವರು ಎಂದರು.
ಪ್ರಗತಿಪರ ಚಿಂತಕಿ ಕೆ. ನೀಲಾ ವಿಷಯ ಮಂಡಿಸಲಿದ್ದು, ಸಂತ ಅಲೋಶಿಯಸ್ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ಆಲ್ವಿನ್ ಡೇಸಾ, ಬದ್ರಿಯಾ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್. ಇಸ್ಮಾಯಿಲ್ ಪ್ರತಿಕ್ರಿಯೆ ನೀಡಲಿದ್ದಾರೆ ಎಂದವರು ಹೇಳಿದರು.
20ನೆ ಶತಮಾನದ ಅತೀ ಶ್ರೇಷ್ಠ ಮಾನವತಾವಾದಿಯಾಗಿ ಗುರುತಿಸಲ್ಪಟ್ಟ ಮದರ್ ತೆರೆಸಾ ತನ್ನ 21ನೆ ವಯಸ್ಸಿನಲ್ಲಿ ಭಾರತಕ್ಕೆ ಬಂದು ವಿದ್ಯೆ ನೀಡುವ ಗುರುವಾಗಿ ಶಾಲಾ ಮುಖ್ಯೋಪಾಧ್ಯಾಯಿನಿಯಾಗಿ 17 ವರ್ಷ ಸೇವೆ ಸಲ್ಲಿಸಿದವರು. ಕೋಲ್ಕತ್ತಾದ ಕೊಳಚೆ ನಿವಾಸಿಗಳ ಬೀದಿಬದಿ ದುರ್ಮರಣಕ್ಕೆ ಒಳಗಾಗುತ್ತಿದ್ದ, ಕುಷ್ಟರೋಗಿಗಳ ಹಾಗೂ ನಿರ್ಲಕ್ಷಿತರ ಬದುಕನ್ನು ಕಂಡು ಮರುಗಿ ಅವರಿಗಾಗಿ ದುಡಿಯುವ ನಿರ್ಧಾರ ಮಾಡಿದವರು. ಅವರ ವಿರುದ್ಧವೂ ಮತಾಂತರದ ಸುಳ್ಲು ಆರೋಪವನ್ನು ಹೊರಿಸಲಾಗಿದ್ದ ಸಂದರ್ಭ ವಿಚಾರಣೆಗೆ ಬಂದ ಅಧಿಕಾರಿಗಳಿಗೆ ತಮ್ಮ ಆಶ್ರಮದಲ್ಲಿದ್ದ ರೋಗಿಗಳನ್ನು ತೋರಿಸಿ ಇವರ ಸೇವೆಯನ್ನು ಯಾರಾದರೂ ಮಾಡುತ್ತೀರಾದರೆ ತಾನು ಇಲ್ಲಿಂದ ನಿರ್ಗಮಿಸುವುದಾಗಿ ದಿಟ್ಟತನದಿಂದ ಹೇಳಿದಾಕೆ ಮದರ್ ತೆರೆಸಾ. ಅವರ ನಿಸ್ವಾರ್ಥ ಸೇವೆಯ ವೌಲ್ಯಗಳನ್ನು ಇಂದಿನ ಯುವಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ವಿಚಾರ ಸಂಕರಣವನ್ನು ಆಯೋಜಿಸಲಾಗುತ್ತಿದೆ ಎಂು ರಾಯ್ ಕ್ಯಾಸ್ತಲಿನೊ ವಿವರಿಸಿದರು.
ವಿಚಾರ ಸಂಕಿರಣದ ವೇಳೆ ಮದರ್ ತೆರೆಸಾ ಜಯಂತಿ ಆಚರಣೆ, ಶಾಲೆಗಳಲ್ಲಿ ಮದರ್ ತೆರೆಸಾರ ಸೇವಾ ವೌಲ್ಯಗಳ ಕುರಿತು ಪಠ್ಯ ಅಳವಡಿಕೆ ಹಾಗೂ ಸಮಾಜ ಸೇವಾ ಕಾರ್ಯಗಳಿಗೆ ಮದರ್ ತೆರೆಸಾ ಹೆಸರಿಡುವ ಬೇಡಿಕೆಗಳನ್ನು ಸಭೆಯ ಅನುಮೋದನೆ ಪಡೆದು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಅವರು ಈ ಸಂದರ್ಭ ತಿಳಿಸಿದರು.
ಗೋಷ್ಠಿಯಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಸಲಹೆಗಾರರಾದ ಜೋಸೆಫ್ ಕ್ರಾಸ್ತಾ, ಮುನೀರ್ ಕಾಟಿಪಳ್ಳ, ಎಂ. ದೇವದಾಸ್, ಕೊರಿನ್ ರಸ್ಕಿನಾ, ಸುಶೀಲ್ ನೊರೊನ್ನಾ, ಡೊಲ್ಫಿ ಡಿಸೋಜಾ ಉಪಸ್ಥಿತರಿದ್ದರು.