ಪಂದ್ಯದ ನಡುವೆಯೇ ಮೈದಾನದೊಳಗೆ ನುಗ್ಗಿದ ಕಾರು

Update: 2017-11-03 14:47 GMT

ಹೊಸದಿಲ್ಲಿ, ನ.3: ದಿಲ್ಲಿ ಹಾಗೂ ಉತ್ತರಪ್ರದೇಶದ ನಡುವೆ ಪಾಲಂನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ‘ಎ’ ಗುಂಪಿನ ಪಂದ್ಯದ ವೇಳೆ ಗಿರೀಶ್ ಶರ್ಮ ಎಂಬಾತ ಅತ್ಯಂತ ವೇಗವಾಗಿ ಮೈದಾನದೊಳಗೆ ವ್ಯಾಗನಾರ್ ಕಾರನ್ನು ಚಲಾಯಿಸಿದ್ದು, ಏರ್‌ಫೋರ್ಸ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಗಂಭೀರ ಭದ್ರತಾ ಲೋಪ ಉಂಟಾಗಿದೆ.

ಮೈದಾನದೊಳಗೆ ಕಾರನ್ನು ನುಗ್ಗಿಸಿದ ಶರ್ಮ, ಆಟಗಾರರು ಹಾಗೂ ಅಂಪೈರ್‌ಗಳ ಮಾತನ್ನು ಕೇಳದೇ ಎರಡು ಬಾರಿ ಪಿಚ್‌ನ ಮೇಲೆ ಕಾರನ್ನು ಓಡಿಸಿದ್ದಾನೆ.ಫೀಲ್ಡಿಂಗ್ ನಿರತ ದಿಲ್ಲಿ ಆಟಗಾರರಾದ ಅಕ್ಷ್‌ದೀಪ್ ನಾಥ್ ಹಾಗೂ ಇಮ್ತಿಯಾಝ್ ಕಾರು ಡಿಕ್ಕಿ ಹೊಡೆಯುವುದರಿಂದ ಪಾರಾದರು. ಅಂತಾರಾಷ್ಟ್ರೀಯ ಆಟಗಾರರಾದ ಗೌತಮ್ ಗಂಭೀರ್, ಸುರೇಶ್ ರೈನಾ, ಇಶಾಂತ್ ಶರ್ಮ ಹಾಗೂ ರಿಷಬ್ ಪಂತ್ ಭದ್ರತಾ ಭೀತಿ ಎದುರಿಸುವಂತಾಯಿತು. ಗೇಟ್ ಬಳಿ ನಿಯೋಜಿತಗೊಂಡಿದ್ದ ಏರ್‌ಫೋರ್ಸ್ ಗಾರ್ಡ್ ಪಂದ್ಯ ವೀಕ್ಷಿಸುತ್ತಿದ್ದ ಹಿನ್ನೆಲೆಯಲ್ಲಿ ಕಾರು ಚಾಲಕ ಮೈದಾನದೊಳಗೆ ನುಗ್ಗಿದ್ದಾನೆ. ಪ್ರೇಕ್ಷಕರತ್ತ ಕಾರು ನುಗ್ಗುವುದನ್ನು ತಡೆದ ಗಾರ್ಡ್, ಚಾಲಕನನ್ನು ಕೆಳಗಿಳಿಸಿ ಥಳಿಸಿದ್ದಾನೆ. ಬಳಿಕ ದಿಲ್ಲಿ ಪೊಲೀಸರ ಕೈಗೆ ಒಪ್ಪಿಸಿದ್ದಾನೆ.

ಪಂದ್ಯ ಕೊನೆಗೊಳ್ಳಲು 20 ನಿಮಿಷಗಳು ಬಾಕಿಯಿರುವಾಗ ಸಂಜೆ 4:40ಕ್ಕೆ ಈ ಅಪರೂಪದ ಘಟನೆ ನಡೆದಿದೆ.

ಮ್ಯಾಚ್ ರೆಫರಿ ಪಿಚ್‌ನ್ನು ಪರೀಕ್ಷಿಸಿದ್ದು, ಪಿಚ್ ಆಡಲು ಯೋಗ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದು, ಪಂದ್ಯ ಶನಿವಾರ ಬೆಳಗ್ಗೆ 9:15ಕ್ಕೆ ಆರಂಭವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News