ರಾಷ್ಟ್ರ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಪಂದ್ಯ ಉದ್ಘಾಟನೆಗೆ ಸಿದ್ಧತೆ ಪೂರ್ಣ- ಕವಿತಾ ಸನಿಲ್
ಮಂಗಳೂರು, ನ.3:ನಗರದ ಸೆಲ್ಫ್ ಡಿಫೆನ್ಸ್ ಸ್ಕೂಲ್ ಆಫ್ ಇಂಡಿಯನ್ ಕರಾಟೆ ಡೋಜೋ ಇದರ ವತಿಯಿಂದ ನ. 4ಮತ್ತು 5ರಂದು ರಾಷ್ಟಮಟ್ಟದ ಮುಕ್ತ ಕರಾಟೆ ಪಂದ್ಯ ‘ಇಂಡಿಯನ್ ಕರಾಟೆ ಚಾಂಪಿಯನ್‌ಶಿಪ್ -2017’ ನೆಹರೂ ಮೈದಾನದಲ್ಲಿ ನಡೆಯಲಿರುವ ಪಂದ್ಯದ ಸಿದ್ಧತೆ ಬಹುತೇಕ ಪೂರ್ಣಗೊಂಡಿದೆ ಎಂದು ಮನಪಾ ಮೇಯರ್ ಹಾಗೂ ಕರಾಟೆ ಪಂದ್ಯದ ಸಂಘಟಕಿ ಕವಿತಾ ಸನಿಲ್ ಹಾಗೂ ಸಂಸ್ಥೆಯ ಸ್ಥಾಪಕಾಧ್ಯಕ್ಷ ಎ.ಸದಾನಂದ ಶೆಟ್ಟಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ 9.30ಕ್ಕೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯ ಮಂತ್ರಿ ಆಗಮಿಸಿಲಿದ್ದಾರೆ. ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಲೋಕೋಪಯೋಗಿ ಬಂದರು ಮತ್ತು ಒಳನಾಡು ಸಾರಿಗೆ ಸಚಿವ ಡಾ.ಎಚ್.ಸಿ .ಮಹಾದೇವಪ್ಪ, ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ.ಖಾದರ್ ಸಂಸದ ನಳಿನ್ ಕುಮಾರ್ ಕಟೀಲ್, ಸರಕಾರದ ಮುಖ್ಯ ಸಚೇತಕ ಐವನ್ ಡಿ ಸೋಜ ಶಾಸಕ ಜೆ.ಆರ್.ಲೋಬೊ, ಶಾಸಕ ಬಿ.ಎ.ಮೊಯ್ದಿನ್ ಬಾವ, ಶಕುಂತಳಾ ಶೆಟ್ಟಿ ಮೊದಲಾದ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಈ ರೀತಿಯ ನಾಲ್ಕು ರಿಂಗ್‌ಗಳನ್ನೊಳಗೊಂಡ ಹೊರಾಂಗಣದಲ್ಲಿ ನಡೆಯುವ ರಾಷ್ಟ್ರಮಟ್ಟದ ಮುಕ್ತ ಕರಾಟೆ ಕ್ರೀಡಾಕೂಟವಾಗಿದೆ. ಈ ಕ್ರೀಡಾ ಕೂಟದಲ್ಲಿ ಹನ್ನೆರಡಕ್ಕೂ ಹೆಚ್ಚು ರಾಜ್ಯಗಳಿಂದ 1200ಕ್ಕೂ ಅಧಿಕ ಕರಾಟೆಪಟುಗಳು ಭಾಗವಹಿಸಲಿದ್ದಾರೆ. ಈಗಾಗಲೇ 500 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ನ.5ರಂದು ಸಂಜೆ 7.30ಕ್ಕೆ ಸಮಾರೋಪ ನಡೆಯಲಿದೆ. ಡಿಜಿಟಲ್ ಸ್ಕೋರ್ ಬೋರ್ಡ್ ಬಳಕೆ ಹಾಗೂ ಅಂತರಾಷ್ಟ್ರೀಯ ದರ್ಜೆಯ ಕರಾಟೆ ರಿಂಗನ್ನು ನಿರ್ಮಿಸಿ ಸ್ಫರ್ಧೆ ನಡೆಸಲಾಗುವುದು. ರಾಷ್ಟ್ರಮಟ್ಟದ ಈ ಕ್ರೀಡಾ ಕೂಟದಲ್ಲಿ ಸೆಲ್ಫ್ ಡಿಫೆನ್ಸ್ ಇಂಡಿಯನ್ ಕರಾಟೆಯ ಸ್ಕೂಲ್‌ನ ಸ್ಥಾಪಕ ಗ್ರಾಂಡ್ ಮಾಸ್ಟರ್‌ಬಿ.ಎಂ.ನರಸಿಂಹನ್, ಮಲೇಶಿಯಾದ ವಸಂತನ್ ತಾಂತ್ರಿಕ ಸಲಹೆಗಾರರಾಗಿ ಹಾಗೂ ಶ್ರೀನಿವಾಸ್ ಎಂ ಪಂದ್ಯದ ಪ್ರಧಾನ ತೀರ್ಪುಗಾರರಾಗಿ ಭಾಗವಹಿಸಲಿದ್ದಾರೆ ಎಂದು ಕವಿತಾ ಸನಿಲ್ ತಿಳಿಸಿದ್ದಾರೆ.
108ವಿವಿಧ ವಿಭಾಗಗಳಲ್ಲಿ ನಡೆಯುವ ಸ್ಫರ್ಧೆಯಲ್ಲಿ ಕಟಾ ಮತ್ತು ಕುಮಿಟೆ ವಿಭಾಗಗಳಲ್ಲಿ ವೈಯಕ್ತಿಕ ಹಾಗೂ ಗುಂಪುಗಳ ನಡುವೆ ಸ್ಫರ್ಧೆ ನಡೆಯಲಿದೆ ಎಂದು ಸಂಘಟಕರಾದ ಮನೀಶ್ ಆಚಾರ್ಯ ತಿಳಿಸಿದ್ದಾರೆ.
ಸುದ್ದಿ ಗೋಷ್ಠಿಯಲ್ಲಿ ಸಂಘಟನೆಯ ದ. ಕ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸುರೇಂದ್ರ, ಕಾರ್ಯದರ್ಶಿ ಮನಿಶ್, ತಾಂತ್ರಿಕ ನಿರ್ದೇಶಕ ಸುರೇಶ್ ಶೆಟ್ಟಿ , ಸಂಘಟಕರು ಮತ್ತು ಮನಪಾ ಮೇಯರ್ ಕವಿತಾ ಸನಿಲ್ ಉಪಸ್ಥಿತರಿದ್ದರು.