ಪಬ್ಲಿಕ್ ಎಡ್ರೆಸ್ ಸಿಸ್ಟಂ ಅನುಷ್ಠಾನಕ್ಕೆ ಸಾರ್ವಜನಿಕರ ಸಲಹೆ
ಮಂಗಳೂರು, ನ.3: ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಸಂಚಾರ ನಿರ್ವಹಣೆಗೆ ಮೈಕ್‌ನಲ್ಲಿ ಅನೌನ್ಸ್ ಮಾಡುವ ಪಬ್ಲಿಕ್ ಎಡ್ರೆಸ್ (ಪಿ.ಎ.) ಸಿಸ್ಟಂ ಜಾರಿಗೊಳಿಸಲಾಗುವುದು ಎಂದು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಹೇಳಿದರು.
ಶುಕ್ರವಾರ ತನ್ನ ಕಚೇರಿಯಲ್ಲಿ ನಡೆದ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರೊಬ್ಬರ ಸಲಹೆಗೆ ಅವರು ಪ್ರತಿಕ್ರಿಯಿಸಿದರು. ಇದಕ್ಕೆ ಪೂರಕವಾಗಿ ಮಾತನಾ ಡಿದ ಸಂಚಾರ ಉತ್ತರ ಠಾಣೆಯ ಇನ್‌ಸ್ಪೆಕ್ಟರ್ ಮಂಜುನಾಥ ಪಣಂಬೂರು ಜಂಕ್ಷನ್‌ನಲ್ಲಿ ಪಿ.ಎ. ಸಿಸ್ಟಂ ಆರಂಭಿಸುವುದಕ್ಕೆ ಪ್ರಾಯೋಜನೆ ನೀಡಲು ಎನ್‌ಎಂಪಿಟಿ ಮುಂದೆ ಬಂದಿದೆ ಎಂದರು.
ಪ್ರಾಯೋಜಕರು ಲಭ್ಯವಿರುವ ಜಂಕ್ಷನ್‌ಗಳಲ್ಲಿ ಮೈಕ್ ಸಿಸ್ಟಂ ಅಳವಡಿಸಲು ಅವಕಾಶ ನೀಡಲಾಗುವುದು. ಪ್ರಾಯೋಜಕರು ಸಿಗದ ಜಂಕ್ಷನ್‌ಗಳಲ್ಲಿ ಪೊಲೀಸ್ ಇಲಾಖೆಯ ವತಿಯಿಂದಲೇ ಪಿ.ಎ. ಸಿಸ್ಟಂ ಆರಂಭಿಸಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ನಗರದ ಹೈಲ್ಯಾಂಡ್‌ನ ಎಸ್.ಎಲ್. ಮಥಾಯಸ್ ರಸ್ತೆಯಲ್ಲಿ ಇತ್ತೀಚೆಗೆ ದ್ವಿಚಕ್ರ ವಾಹನ ಸವಾರರೊಬ್ಬರು ಮೊಬೈಲ್ ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸಿದ್ದರಿಂದ ಇನ್ನೊಂದು ವಾಹನವನ್ನು ಓವರ್‌ಟೇಕ್ ಮಾಡುವ ಸಂದರ್ಭ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಗುವಿಗೆ ಢಿಕ್ಕಿ ಹೊಡೆದು ಮಗು ತೀವ್ರ ಗಾಯಗೊಂಡಿದೆ. ಗಾಯಗೊಂಡಿರುವ ಮಗು ಇನ್ನು 3 ತಿಂಗಳು ಮನೆಯೊಳಗೆ ಇರಬೇಕಾದ ಪರಿಸ್ಥಿತಿ ಬಂದಿದೆ. ಆದ್ದರಿಂದ ಮೊಬೈಲ್ ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸುತ್ತಿರುವ ಸವಾರರ ಮೇಲೆ ಕ್ರಮ ಜರಗಿಸಬೇಕು ಎಂದು ಮಹಿಳೆಯೊಬ್ಬರು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಆಯುಕ್ತರು ದ್ವಿಚಕ್ರ ವಾಹನ ಸವಾರರು ಮೊಬೈಲ್ ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸಿ ಅಪಘಾತಗಳಿಗೆ ಕಾರಣವಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವುದು ನಿಜ. ಈ ಬಗ್ಗೆ ತಪಾಸಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಕೆಲವು ಬೈಕ್ ಸವಾರರು ಹೆಲ್ಮೆಟ್ ಧರಿಸುತ್ತಿಲ್ಲ. ಇನ್ನೂ ಕೆಲವು ಬೈಕ್‌ಗಳಲ್ಲಿ ಮೂವರು ಪ್ರಯಾಣಿಸುತ್ತಾರೆ. ಅತ್ತಾವರ ನ್ಯೂ ರೋಡ್‌ನಲ್ಲಿ ಬೆಳಗ್ಗಿನ 6 ಗಂಟೆ ವೇಳೆಗೆ ಟ್ಯೂಶನ್‌ಗೆ ಹೋಗುವ ಅನೇಕ ಮಂದಿ ಲೈಸನ್ಸ್ ಇಲ್ಲದೆ ವಾಹನ ಚಲಾಯಿಸುತ್ತಾರೆ. ಬಿಕರ್ನಕಟ್ಟೆ - ಶಕ್ತಿನಗರ ಕ್ರಾಸ್ ಬಳಿ ರಾಂಗ್ ಸೈಡ್‌ನಿಂದ ವಾಹನ ಚಲಾಯಿಸಿಕೊಂಡು ಬರುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಅಪಘಾತಗಳು ಸಂಭವಿಸುವ ಸಾಧ್ಯತೆಗಳಿವೆ ಎಂಬ ದೂರುಗಳು ಈ ಸಂದರ್ಭ ಬಂದವು.
ಮಿತಿ ಮಿರೀದ ವೇಗ ಮತ್ತು ಮದ್ಯಪಾನ ಮಾಡಿ ವಾಹನ ಚಾಲನೆ ಮತ್ತಿತರ ಪ್ರಕರಣಗಳ ಪತ್ತೆಗಾಗಿ ಟ್ರಾಫಿಕ್ ಪೊಲೀಸರ ಬಳಿ 3 ಇಂಟರ್ ಸೆಪ್ಟರ್ ವಾಹನಗಳಿದ್ದು, ಅವುಗಳನ್ನು ವಿವಿಧ ರಸ್ತೆಗಳಲ್ಲಿ ನಿಗದಿತ ಸಮಯದಲ್ಲಿ ಕಾರ್ಯಾಚರಣೆ ನಡೆಸಲು ವ್ಯವಸ್ಥೆ ಮಾಡಲಾಗುವುದು ಎಂದು ಕಮಿಷನರ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸೆಂಟ್ರಲ್ ರೈಲು ನಿಲ್ದಾಣದ ರಸ್ತೆ ಅಗಲ ಕಿರಿದಾಗಿದ್ದು, ಸಂಜೆ ಹೊತ್ತು ಸಂಚಾರ ದುಸ್ತರವಾಗಿದೆ. ಆದ್ದರಿಂದ ರಸ್ತೆ ಅಗಲ ಮಾಡಬೇಕು ಎಂಬ ಸಲಹೆಗೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್ ಈ ಕುರಿತಂತೆ ರೈಲ್ವೆ ಮತ್ತು ಮಹಾನಗರ ಪಾಲಿಕೆಗೆ ಪತ್ರ ಬರೆಯಲಾಗುವುದು ಎಂದರು.
ಶುಕ್ರವಾರ ನಡೆದ 62ನೆ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ 28 ಕರೆಗಳು ಸ್ವೀಕೃತವಾದವು. ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್, ಎಸಿಪಿಗಳಾದ ಮಂಜುನಾಥ ಶೆಟ್ಟಿ, ವೆಲೆಂಟೈನ್ ಡಿೞಸೋಜಾ, ಇನ್‌ಸ್ಪೆಕ್ಟರ್‌ಗಳಾದ ಸುರೇಶ್ ಕುಮಾರ್, ಮಂಜುನಾಥ್, ಮುಹಮ್ಮದ್ ಶರೀಫ್, ಎಎಸ್ಸೈ ಯೂಸುಫ್ ಉಪಸ್ಥಿತರಿದ್ದರು.