×
Ad

ಸ್ಥಗಿತಗೊಂಡ ಟ್ರಂಪ್ ಟ್ವಿಟರ್ ಖಾತೆ !

Update: 2017-11-03 22:06 IST

ವಾಶಿಂಗ್ಟನ್, ನ. 3: ಉದ್ಯೋಗಿಯೋರ್ವ ತನ್ನ ಸೇವೆಯ ಕೊನೆಯ ದಿನದಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ವೈಯಕ್ತಿಕ ಟ್ವಿಟರ್ ಖಾತೆಯನ್ನು ಸ್ಥಗಿತಗೊಳಿಸಿದ್ದಾನೆ ಎಂಬುದಾಗಿ ಟ್ವಿಟರ್ ಗುರುವಾರ ಹೇಳಿದೆ.

ಆ ಉದ್ಯೋಗಿ ಯಾರೆನ್ನುವುದನ್ನು ಟ್ವಿಟರ್ ಬಹಿರಂಗಪಡಿಸಿಲ್ಲ. ಈ ಉದ್ಯೋಗಿಯ ಕೃತ್ಯದಿಂದಾಗಿ ಟ್ರಂಪ್‌ರ ಖಾತೆ (@realdonaldtrump)  11 ನಿಮಿಷಗಳ ಕಾಲ ಸ್ಥಗಿತಗೊಂಡಿತು.

ಗುರುವಾರ ಸಂಜೆ 4 ಗಂಟೆಗೆ ಸ್ವಲ್ಪ ಮೊದಲು ಅವರ ಖಾತೆಯು ಸ್ಥಗಿತಗೊಂಡಿತು. ಈ ಕಿರು ಅವಧಿಯಲ್ಲಿ ಟ್ರಂಪ್‌ರ ಟ್ವಿಟರ್ ಪುಟಕ್ಕೆ ಭೇಟಿ ನೀಡಿದವರನ್ನು ‘ಕ್ಷಮಿಸಿ, ಈ ಪುಟ ಅಸ್ತಿತ್ವದಲ್ಲಿಲ್ಲ’ ಎಂಬ ಬರಹ ಸ್ವಾಗತಿಸಿತು.

ಏನಾಗಿದೆ ಎಂಬ ಬಗ್ಗೆ ವ್ಯಾಪಕ ಊಹಾಪೋಹಗಳು ಹಬ್ಬಿದ ಬಳಿಕ, ‘ಟ್ವಿಟರ್ ಉದ್ಯೋಗಿಯೋರ್ವನ ಮಾನವ ಸಹಜ ತಪ್ಪಿನಿಂದಾಗಿ ಟ್ರಂಪ್ ಖಾತೆಯು ಗೊತ್ತಿಲ್ಲದೆ ಸ್ಥಗಿತಗೊಂಡಿದೆ’ ಎಂಬ ಮೊದಲ ಹೇಳಿಕೆಯನ್ನು ಟ್ವಿಟರ್ ನೀಡಿತು.

ಸ್ವಲ್ಪ ಹೊತ್ತಿನಲ್ಲಿ ಟ್ವಿಟರ್ ತನ್ನ ಟ್ವಿಟರ್ ಖಾತೆಯಲ್ಲಿ ಸಂದೇಶವೊಂದನ್ನು ಹಾಕಿ, ಉದ್ಯೋಗಿಯೊಬ್ಬನ ದ್ವೇಷ ಕೃತ್ಯದಿಂದಾಗಿ ಟ್ರಂಪ್ ಖಾತೆ ಸ್ಥಗಿತಗೊಂಡಿದೆ ಎಂದು ಹೇಳಿತು.

‘‘ಟ್ವಿಟರ್ ಗ್ರಾಹಕ ನೆರವು ಸಿಬ್ಬಂದಿಯೋರ್ವ ತನ್ನ ಕೊನೆಯ ಸೇವಾ ದಿನದಂದು ಈ ಕೃತ್ಯ ನಡೆಸಿರುವುದು ನಮ್ಮ ತನಿಖೆಯಿಂದ ಗೊತ್ತಾಗಿದೆ. ನಾವು ಸಂಪೂರ್ಣ ಆಂತರಿಕ ತನಿಖೆ ನಡೆಸುತ್ತಿದ್ದೇವೆ’’ ಎಂದು ನೂತನ ಹೇಳಿಕೆ ತಿಳಿಸಿತು.

ಟ್ರಂಪ್ ಟ್ವಿಟರ್‌ನಲ್ಲಿ 4 ಕೋಟಿ ಅನುಯಾಯಿಗಳನ್ನು ಹೊಂದಿದ್ದಾರೆ.

ಜಗತ್ತು ಪ್ರಶಾಂತವಾಗಿತ್ತು!

11ನಿಮಿಷಗಳ ಕಾಲ ಟ್ರಂಪ್‌ರ ಟ್ವಿಟರ್ ಖಾತೆ ಸ್ಥಗಿತಗೊಂಡಿದ್ದನ್ನು ಟ್ವಿಟರಿಗರು ಆನಂದಿಸಿದರು!

11 ನಿಮಿಷಗಳ ಕಾಲ ಜಗತ್ತು ಶಾಂತಿ ಮತ್ತು ನೆಮ್ಮದಿಯಿಂದ ಇತ್ತು ಎಂದು ಹಲವರು ಪ್ರತಿಕ್ರಿಯಿಸಿದರು.

ಟ್ರಂಪ್ ಖಾತೆಯನ್ನು ಸ್ಥಗಿತಗೊಳಿಸಿದ ಆ ಉದ್ಯೋಗಿ ‘ರಾಷ್ಟ್ರೀಯ ಹೀರೊ’ ಎಂಬುದಾಗಿ ಹಲವರು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News