ಕರಾವಳಿಯ ಸಾಹಿತ್ಯ ವಿದ್ವತ್ ಪರಂಪರೆಯ ಸಾಧಕರು ಅಭಿನಂದನೀಯರು: ಪ್ರೊ. ಮಲ್ಲೇಪುರಂ.ಜಿ.ವೆಂಕಟೇಶ್

Update: 2017-11-03 16:48 GMT

ಮೂಡುಬಿದಿರೆ, ನ. 3: ಸಾಹಿತ್ಯ ರಂಗದಲ್ಲಿ ಗಣನೀಯ ಸಾಧಕರಿಗೆ ನೀಡುವ ಗೌರವವು ಆ ಕ್ಷೇತ್ರಕ್ಕೆ ಸಲ್ಲುವ ಮನ್ನಣೆಯಾಗಿದೆ. ವಿದ್ವಜ್ಜನರ ಪರಂಪರೆಯನ್ನೇ ಹೊಂದಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ರಂಗಗಳಲ್ಲಿ ಅನನ್ಯ ಸಾಧಕರಿದ್ದು ರಾಜಕಾರಣದ ಲೇಪವಿಲ್ಲದೇ ನಡೆದಿರುವ ಈ ಬೆಳವಣಿಗೆ ಮಹತ್ವಪೂರ್ಣವಾದದ್ದು. ಪ್ರಶಸ್ತಿಗಳಿಗಾಗಿ ಲಾಬಿ ಹುಟ್ಟಿಕೊಂಡಿರುವ ಇಂದಿನ ದಿನಗಳಲ್ಲಿ ಅರ್ಹರನ್ನು ಗುರುತಿಸಿ ಗೌರವಿಸುವ ಕರಾವಳಿಯ ಈ ಪರಂಪರೆ ವಿಶೇಷವಾದದ್ದು ಎಂದು ಸಂಸ್ಕೃತಿ ವಿ.ವಿಯ ನಿವೃತ್ತ ಕುಲಪತಿ ಪ್ರೊ. ಮಲ್ಲೇಪುರಂ ಜಿ.ವೆಂಕಟೇಶ್ ಹೇಳಿದರು.

ಅವರು ಕಾಂತಾವರದ ಕನ್ನಡ ಭವನದಲ್ಲಿ ಕನ್ನಡ ಸಂಘದ 41ನೇ ವರ್ಧಂತ್ಯುತ್ಸವದ ಅಂಗವಾಗಿ ಎರಡು ದಿನಗಳ ಸಾಹಿತ್ಯ ಸಂಭ್ರಮ ಕಾಂತಾವರ ಉತ್ಸವ 2017 ಉದ್ಘಾಟಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಅವರು ರಮಾನಂದ ಘಾಟೆಯವರ ಸಮಗ್ರಕತೆಗಳು, (ಸಂ: ಡಾ.ಬಿ.ಜನಾರ್ದನ ಭಟ್) , ರಸಿಕ ಪುತ್ತಿಗೆ ಅವರ ’ಮಂತ್ರ ತಂತ್ರ ಸಿದ್ಧಾಂತ ಅನುಭವಗಳು’, (ಸಂ: ಡಾ.ಬಿ. ಜನಾರ್ದನ ಭಟ್), ಡಾ.ನಾ.ಮೊಗಸಾಲೆ ಅವರ ಲೇಖನಗಳ ಸಂಗ್ರಹ ’ಶರಣರ ನುಡಿಹೆಜ್ಜೆ ನಡೆಗೆಜ್ಜೆ’. ಡಾ.ನಾ.ಮೊಗಸಾಲೆ ಅವರ ಆತ್ಮವೃತ್ತಾಂತ ’ಬಯಲಬೆಟ್ಟ’, (ದ್ವಿತೀಯ ಮುದ್ರಣ), ’ಕಾಂತಾವರದ ಕಾಂತಾ - ರವ ಡಾ.ನಾ.ಮೊಗಸಾಲೆ’ (ಲೇ:ಬೆಳಗೋಡು ರಮೇಶ್ ಭಟ್) ಎಂಬ ನೂತನ ಐದು ಕೃತಿಗಳನ್ನು ಲೋಕಾರ್ಪಣೆಗೊಳಿಸಿದರು. ಕನ್ನಡ ಸಂಘದ ವತಿಯಿಂದ ನಾಡಿನ ಸಾಧಕರನ್ನು ಪರಿಚಯಿಸುವ ನಿಟ್ಟಿನಲ್ಲಿ ಆರಂಭಿಸಲಾದ ’ಸಾಧನಾ ಸಂಚಯ’ ಗ್ರಂಥ ಮಾಲೆಯ ಮೊದಲ ಕೃತಿ’ ವೇದ ವಿಜ್ಞಾನಿ ಸುಧಾರಕ ಸುಧಾಕರ’ ಅನಾವರಣಗೊಳಿಸಿ ಅವರು ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕ.ಸಾ.ಪರಿಷತ್ ನಿಕಟಪೂರ್ವ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಸಂಘದಲ್ಲಿನ ದತ್ತಿ ಪ್ರಾಯೋಜಕತ್ವದ ಪ್ರಶಸ್ತಿಗಳ ಪ್ರದಾನ ಮಾಡಿದರು. ಕರ್ನಾಟಕ ಸಾಂಸ್ಕೃತಿಕ ಏಕೀಕರಣ ಪ್ರಶಸ್ತಿಯನ್ನು ಡಾ. ತಮಿಳ್ ಸೆಲ್ವಿ, ಚೆನ್ನೈ ,ವಿದ್ವತ್‌ಪರಂಪರಾ ಪುರಸ್ಕಾರವನ್ನು ಪ್ರೊ. ಎಂ.ರಾಮಚಂದ್ರ ಕಾರ್ಕಳ, ಕಾಂತಾವರ (ಅನುವಾದ) ಸಾಹಿತ್ಯ ಪುರಸ್ಕಾರವನ್ನು ಪ್ರೊ.ಎನ್.ಟಿ.ಭಟ್ ಉಡುಪಿ, ಕಾಂತಾವರ ಸಾಹಿತ್ಯ ಪುರಸ್ಕಾರವನ್ನು ಪ್ರೊ.ಸಿ.ನಾಗಣ್ಣ ಮೈಸೂರು, ಸಂಶೋಧನಾ ಮಹೋಪಾಧ್ಯಾಯ ಪುರಸ್ಕಾರವನ್ನು ಡಾ.ಬಿ.ಜನಾರ್ದನ ಭಟ್ ಬೆಳ್ಮಣ್ ಅವರಿಗೆ ನೀಡಿ ಗೌರವಿಸಲಾಯಿತು. ರಾಜಕೀಯ ಕಾರಣಗಳಿಂದಾಗಿ ತಮಿಳು ಕನ್ನಡ ಸಾಹಿತ್ಯ ಸಾಮರಸ್ಯ ಕದಡಿದೆ ಎಂದು ಡಾ. ತಮಿಳ್ ಸೆಲ್ವಿ ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಮಾತನಾಡಿದ ಪುನರೂರು ಅವರು ಕನ್ನಡವನ್ನು ಉಳಿಸಿ ಬೆಳೆಸುವ ಸರ್ಕಾರದ ಕಾಳಜಿ ಹೇಗಿದೆ ಎನ್ನುವುದು ಮುಚ್ಚುತ್ತಿರುವ ಕನ್ನಡ ಶಾಲೆಗಳ ದುಸ್ಥಿತಿ ಕಂಡಾಗ ಅರಿವಾಗುತ್ತದೆ. ಕನ್ನಡ ಉಳಿಸುವ ಕೆಲಸ ಕನ್ನಡಿಗರಿಂದಲೇ ಆಗಬೇಕಿದೆ. ಈ ನಿಟ್ಟಿನಲ್ಲಿ ನಾಡು ನುಡಿ ಸೇವೆಯಲ್ಲಿರುವ ಕನ್ನಡ ಸಂಘಟನೆಗಳನ್ನೂ ನಾವು ಬೆಂಬಲಿಸಿ ಪ್ರೋತ್ಸಾಹಿಸಬೇಕಾಗಿದೆ ಎಂದರು.

 ಮುಖ್ಯ ಅತಿಥಿಯಾಗಿದ್ದ ಮುಂಬೈನ ಹಿರಿಯ ಸಾಹಿತಿ ಪ್ರೊ. ಜಿ.ಡಿ.ಜೋಶಿ ಮಾತನಾಡಿ ಗಡಿನಾಡಿನಲ್ಲಿ ಕನ್ನಡಿಗರ ಪ್ರೀತಿಯೇ ಅಲ್ಲಿನ ಶಾಲೆಗಳ ಮೂಲಕ ಕನ್ನಡ ಉಳಿಸಿಕೊಂಡಿದ್ದು ಸರ್ಕಾರ ಈ ಕುರಿತು ಗಮನ ಹರಿಸಬೇಕಿದೆ ಎಂದರು. ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ. ನಾ. ಮೊಗಸಾಲೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಸ್ವಾಗತಿಸಿದರು. ಬಾಬು ಶೆಟ್ಟಿ ನಾರಾವಿ ವಂದಿಸಿದರು. ಸರೋಜಿನಿ ನಾಗಪ್ಪಯ್ಯ ಕಾರ್ಯಕ್ರಮ ನಿರೂಪಿಸಿದರು. ವಿಠಲ ಬೇಲಾಡಿ ಸಮ್ಮಾನಿತರನ್ನು ಪರಿಚಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News