×
Ad

8 ಜಿಲ್ಲೆಗಳ ರೈತರ ಆರೋಗ್ಯ ತಪಾಸಣೆ: ಪ್ರಕಾಶ್ ಕಮ್ಮರಡಿ

Update: 2017-11-03 22:20 IST

ಉಡುಪಿ, ನ.3: ರೈತರ ಆರೋಗ್ಯ, ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದಂತೆ ಆಯ್ದ ಎಂಟು ಜಿಲ್ಲೆಗಳ ತಲಾ 25 ರೈತರಿಗೆ ಮಣಿಪಾಲದ ಕಸ್ತೂರ್‌ಬಾ ಮೆಡಿಕಲ್ ಕಾಲೇಜು ವೈದ್ಯರ ಸಹಕಾರದಿಂದ ಡಿ.22 ಮತ್ತು 23ರಂದು ಆರೋಗ್ಯ ತಪಾಸಣೆಯನ್ನು ಏರ್ಪಡಿಸಲಾಗುವುದು ಅಲ್ಲದೇ ಸಮಗ್ರ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಕೃಷಿ ಬೆಲೆ ಆಯೋದ ಪ್ರಕಾಶ್ ಕಮ್ಮರಡಿ ತಿಳಿಸಿದ್ದಾರೆ.

ಶುಕ್ರವಾರ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿ ಸಲಾದ ಕೆವಿಕೆ ಮುಖ್ಯಸ್ಥರು ಮತ್ತು ಆಯ್ದ ಜಿಲ್ಲೆಗಳ ಕೃಷಿ ಅಧಿಕಾರಿಗಳು ಹಾಗೂ ಕೆಎಂಸಿಯ ಡಾಕ್ಟರ್‌ಗಳೊಂದಿಗೆ ಸಭೆ ನಡೆಸಿದ ಅವರು ಕಾರ್ಯಕ್ರಮದ ಕುರಿತು ಹಲವು ನಿರ್ಧಾರಗಳನ್ನು ಸಭೆಗೆ ತಿಳಿಸಿದರು.

 ಕೃಷಿ ಬೆಲೆ ಆಯೋಗ ಕೃಷಿ ಬೆಲೆ, ಆದಾಯ ಭದ್ರತೆ ಜೊತೆಗೆ ರೈತರ ಆರೋಗ್ಯದ ಬಗ್ಗೆಯೂ ಸಮಗ್ರ ಚಿಂತನೆ ನಡೆಸುತ್ತಿದೆ. ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಸುವ ಸಂಶೋಧನೆಗಳು ರೈತರಿಗೆ ತಲುಪುವ ಬಗ್ಗೆ, ಯಾಂತ್ರೀಕೃತ ಕೃಷಿ ಬಗ್ಗೆ, ಸಮಗ್ರ ಕೃಷಿ ಪ್ರಯೋಗಗಳನ್ನು ರೈತರಿಗೆ ತಲುಪಿಸುವ ನಿಟ್ಟಿನಲ್ಲೂ ಕರ್ನಾಟಕ ಕೃಷಿ ಬೆಲೆ ಆಯೋಗ ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ರೈತರ ಹಿತ ಕಾಯುವುದೇ ಆಯೋಗದ ಉದ್ದೇಶವಾಗಿದೆ ಎಂದರು.

ರಾಯಚೂರು, ಕಲ್ಬುರ್ಗಿ, ಕೋಲಾರ, ತುಮಕೂರು, ದಕ್ಷಿಣ ಕನ್ನಡ, ಉಡುಪಿ, ಚಿತ್ರದುರ್ಗ, ಹಾವೇರಿ ಜಿಲ್ಲೆಗಳಿಂದ ಕೆವಿಕೆ ಮತ್ತು ಕೃಷಿ ಇಲಾಖೆ ಸಹಕಾರದಿಂದ ರೈತರು ಉಡುಪಿಗೆ ಆಗಮಿಸಿ ದೈಹಿಕ ತಪಾಸಣೆ, ವ್ಯಕ್ತಿತ್ವ ವಿಕಸನಕ್ಕೆ ಪೂರಕ ಚಟುವಟಿಕೆಗಳನ್ನು ಕಲಿಯುವುದಲ್ಲದೆ, 24ರಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಧರೆಗುಡ್ಡೆಯ ಪ್ರಗತಿಪರ ಕೃಷಿಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಈ ಭೇಟಿಯನ್ನು ಸುಬಾಷ್‌ಚಂದ್ರ ಚೌಟ ಮತ್ತು ರಾಜವರ್ಮ ಬಯ್ಯಂಗಡಿ ನಿರ್ವಹಿಸಲಿರುವರು ಎಂದು ಕಮ್ಮರಡಿ ವಿವರಿಸಿದರು.

ಮಣಿಪಾಲ ಕೆಎಂಸಿಯ ವೈದ್ಯರಾದ ಡಾ.ಶಂಕರ್, ಡಾ.ವಿನುತ ಉಪಸ್ಥಿತ ರಿದ್ದರು. ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಕಾರ್ಯಕ್ರಮಗಳ ಆಯೋಜನೆಗೆ ಸಂಬಂಧಿಸಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News