ಮನೆಮನೆಗೂ ಕಾನೂನು ಮಾಹಿತಿ, ಜಾಗೃತಿ ಕಾರ್ಯಕ್ರಮ
ಉಡುಪಿ, ನ.3: ಸೇವೆಗಾಗಿ ಸಂಪರ್ಕ ಧ್ಯೇಯವಾಕ್ಯದಡಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮನೆಮನೆಗೂ ಕಾನೂನು ಮಾಹಿತಿ, ನೊಂದವರಿಗೆ ನೆರವು ನೀಡುವ ನಿಟ್ಟಿನಲ್ಲಿ ನ.9ರಿಂದ 18ರವರೆಗೆ ಜಿಲ್ಲೆಯಾದ್ಯಂತ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಜಾಗೃತಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಹಾಗೂ ಅರ್ಥಪೂರ್ಣ ವಾಗಿ ಆಯೋಜಿಸಲು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವೆಂಕಟೇಶ್ ನಾಯ್ಕಾ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಸಮಾಜದ ದುರ್ಬಲರು ಮತ್ತು ನೊಂದವರಿಗೆ ಕಾನೂನು ಸೇವಾ ಪ್ರಾಧಿಕಾರ ದ ಕುರಿತ ಮಾಹಿತಿ, ಯಾವ ರೀತಿಯ ನೆರವನ್ನು ಪಡೆಯಬಹುದೆಂಬ ಬಗ್ಗೆ ತಿಳುವಳಿಕೆ, ಕಾನೂನಿನ ನೆರವು ಬೇಕಿರುವ ಅರ್ಹರ ಗುರುತಿಸುವಿಕೆಗಳೆಲ್ಲವೂ ಈ ಜಾಗೃತಿ ಕಾರ್ಯಕ್ರಮದ ವೇಳೆ ನಡೆಯಲಿದೆ ಎಂದು ನ್ಯಾಯಾಧೀಶರು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ್ ಉಪಸ್ಥಿತ ರಿದ್ದರು. ವಿವಿಧ ಇಲಾಖಾ ಅಧಿಕಾರಿಗಳು ಪಾಲ್ಗೊಂಡರು.