×
Ad

ಭ್ರಷ್ಟಾಚಾರ ಒಂದು ಮಾನಸಿಕತೆ: ಎಸ್ಪಿ ಸಂಜೀವ ಪಾಟೀಲ್

Update: 2017-11-03 22:46 IST

ಉಡುಪಿ, ನ.3: ಭ್ರಷ್ಟಾಚಾರ ಎಂಬುದು ಒಂದು ಮಾನಸಿಕತೆ. ಲಂಚ ಕೊಡುವವನು ಇರುವವರೆಗೆ, ತೆಗೆದುಕೊಳ್ಳುವವನೂ ಇರುತ್ತಾನೆ. ಯಾವಾಗ ಜನ ಪ್ರತಿಯೊಂದನ್ನು ಪ್ರಶ್ನಿಸತೊಡಗುತ್ತಾರೊ ಅಂದು ಇದು ತನ್ನಿಂದ ತಾನೇ ಕಡಿಮೆಯಾಗುತ್ತದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಎಂ.ಪಾಟೀಲ್ ಹೇಳಿದ್ದಾರೆ.

ವಿಜಯಾ ಬ್ಯಾಂಕ್‌ನ ಉಡುಪಿ ಪ್ರಾದೇಶಿಕ ಕಚೇರಿಯ ವತಿಯಿಂದ ನಗರದ ಅಂಬಲಪಾಡಿಯಲ್ಲಿರುವ ಶ್ಯಾಮಿಲಿ ಮಿನಿ ಸಭಾಂಗಣದಲ್ಲಿ ಇಂದು ನಡೆದ ‘ಜಾಗೃತಿ ಅರಿವು ಸಪ್ತಾಹ’ವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಹುಟ್ಟುವಾಗ ಯಾರೂ ಭ್ರಷ್ಟರಾಗಿರುವುದಿಲ್ಲ. ನಾವು ನಮ್ಮ ಕೆಲಸ ಸುಲಭ ಮಾಡಿಕೊಳ್ಳಲು ಇದಕ್ಕೆ ಅವಕಾಶ ಮಾಡಿಕೊಡುತ್ತೇವೆ. ಮುಂದೆ ಈ ಚಕ್ರ ನಿರಂತರವಾಗಿ ಮುಂದುವರಿಯುತ್ತದೆ. ವ್ಯವಸ್ಥೆಯ ಭ್ರಷ್ಟತೆಗೂ ನಾವೇ ದಾರಿ ಮಾಡಿಕೊಡುತ್ತೇವೆ. ಈ ಬಗ್ಗೆ ಮೊದಲು ಜನಸಾಮಾನ್ಯರಲ್ಲಿ ಅರಿವು ಮೂಡ ಬೇಕಿದೆ ಎಂದು ಡಾ.ಪಾಟೀಲ್ ನುಡಿದರು.

ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ವ್ಯಕ್ತಿಯನ್ನು ಗುರಿಯಾಗಿರಿಸಿ ಕೊಳ್ಳದೇ, ವ್ಯವಸ್ಥೆಯ ಲೋಪದೋಷಗಳನ್ನು ಸರಿಪಡಿಸಲು ಆದ್ಯತೆ ನೀಡಬೇಕು. ಆಡಳಿತದಲ್ಲಿ ಪಾರದರ್ಶಕತೆ ಇದ್ದಾಗ ಭ್ರಷ್ಟಾಚಾರ ಸಹಜವಾಗಿ ಕಡಿಮೆಯಾಗುತ್ತದೆ ಎಂದರು.

ಉಡುಪಿ ಪ್ರಾದೇಶಿಕ ಕಚೇರಿಯ ಚೀಫ್ ಮ್ಯಾನೇಜರ್ ಚಿದಾನಂದ ಹೆಗ್ಡೆ ಅವರು ನೆರೆದ ಸಭಿಕರಿಗೆ, ಬ್ಯಾಂಕಿನ ಅಧಿಕಾರಿಗಳು ಹಾಗೂ ಗ್ರಾಹಕರಿಗೆ ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞೆಯನ್ನು ಬೋಧಿಸಿದರು. ಸೀನಿಯರ್ ಮ್ಯಾನೇಜರ್ ಮಾಯಾ ಎಸ್. ಅವರು ಈ ಬಾರಿಯ ಜಾಗೃತಿ ಅರಿವು ಸಪ್ತಾಹ ಹಾಗೂ ಘೋಷವಾಕ್ಯ ‘ಮೈ ವಿಷನ್-ಕರಫ್ಷನ್ ಫ್ರಿ ಇಂಡಿಯಾ’ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯಾ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಡಿಜಿಎಂ ಎಂ.ಜೆ.ನಾಗರಾಜ್ ಅತಿಥಿಗಳನ್ನು ಸ್ವಾಗತಿಸಿದರೆ, ಚೀಫ್ ಮ್ಯಾನೇಜರ್ ಜಿಲಾನಿ ಬಾಷಾ ವಂದಿಸಿದರು. ರಶ್ಮಿ ಲೋಬೊ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News