×
Ad

ಕಳ್ಳ ಭಟ್ಟಿ ಸಾಗಾಟ: ಮೂವರು ಆರೋಪಿಗಳ ಬಂಧನ

Update: 2017-11-03 23:21 IST

ಮಂಗಳೂರು,ನ. 4:  ಕೊಣಾಜೆ ಅಂಬ್ಲಮೊಗರು ಗ್ರಾಮದ ಎಲಿಯಾರ್ ಪದವು ಎಂಬಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಹಾಗೂ ದಾಸ್ತಾನು ಇರಿಸಿದ್ದ ಸ್ಪಿರಿಟ್ (ಕಳ್ಳ ಭಟ್ಟಿ) ಸಹಿತ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕೊಣಾಜೆ ಗ್ರಾಮದ ಪಾಲೆಮಾರ್‌ನ ಮೋಹನ್‌ದಾಸ್‌ಎಂ.ಶೆಟ್ಟಿ (36) ಮತ್ತು ಕುತ್ತಾರು ಕೋಡಿ ಮನೆ ನಿವಾಸಿ ಬೋಜ ಕೊಟ್ಟಾರಿ (50) ಬಂಧಿತ ಆರೋಪಿಗಳು. ಎಲಿಯಾರ್ ಪದವು ಎಂಬಲ್ಲಿ ಕಾರೊಂದರಲ್ಲಿ ಅಕ್ರಮವಾಗಿ ಸ್ಪಿರಿಟ್ (ಕಳ್ಳ ಭಟ್ಟಿ) ನ್ನು ಸಾಗಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಎಲಿಯಾರ್ ಪದವು ಎಂಬಲ್ಲಿ  ಕಾರು ಮತ್ತು ಅದರಲ್ಲಿದ ಸ್ಪಿರಿಟ್‌ನ್ನು ವಶಕ್ಕೆತೆಗೆದುಕೊಂಡು ಕಾರಿನಲ್ಲಿದ್ದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಎಲಿಯಾರ್‌ಪದವಿನ ಡೆನ್ಜಿಲ್ ವಿಕ್ಸನ್ ಡಿಸೋಜ (28), ಕಾರಿನಲ್ಲಿ ಹಾಗೂ ಬಾಡಿಗೆ ಮನೆಯೊಂದರಲ್ಲಿ ತಲಾ 35 ಲೀಟರ್‌ನ 10 ಕ್ಯಾನ್ ಗಳಲ್ಲಿ ದಾಸ್ತಾನು ಇರಿಸಿದ್ದ ಒಟ್ಟು 350 ಲೀಟರ್ ಸ್ಪಿರಿಟ್ (ಕಳ್ಳ ಭಟ್ಟಿ), 4 ಮೊಬೈಲ್ ಫೋನ್‌ಗಳು ಹಾಗೂ ಸಾಗಾಟಕ್ಕೆ ಉಪಯೋಗಿಸಿದ  ಕಾರನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಆರೋಪಿಗಳಿಂದ ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ.7,02,900 ಎಂದು ಅಂದಾಜಿಸಲಾಗಿದೆ. ಆರೋಪಿಗಳ ಪೈಕಿ ಮೋಹನ್ ಶೆಟ್ಟಿ ಈ ಅಕ್ರಮ ಸ್ಪಿರಿಟ್ ದಂಧೆಯ ರೂವಾರಿಯಾಗಿದ್ದಾನೆ. ಆರೋಪಿಗಳು ಮಂಜೇಶ್ವರ ಮೂಲದ ವ್ಯಕ್ತಿಯೊಬ್ಬನಿಂದ ಈ ಸ್ಪಿರಿಟ್ ಖರೀದಿಸಿ ನಂತರ ಒಂದು ಕ್ಯಾನ್ ಸ್ಪಿರಿಟ್‌ಗೆ 3 ಕ್ಯಾನ್ ನೀರು ಸೇರಿಸಿ ಮಾರಾಟ ಮಾಡುವುದಾಗಿದೆ. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಕೊಣಾಜೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಆರೋಪಿ ಡೆನ್ಜಿಲ್ ವಿಕ್ಸನ್ ಡಿಸೋಜನ ವಿರುದ್ಧ ಈ ಹಿಂದೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆಯಂತೆ ಪ್ರಕರಣವೊಂದು ದಾಖಲಾಗಿತ್ತು. ಈತನು ಈ ಹಿಂದೆ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದ ಮೆಲ್ವಿನ್ ವಿಶ್ವಾಸ್ ಡಿ ಸೋಜಾ ಎಂಬಾತನ ಸಹೋದರನಾಗಿದ್ದಾನೆ. ಆರೋಪಿಗಳ ಪೈಕಿ ಮೋಹನ್ ಶೆಟ್ಟಿ ಎಂಬಾತನು ಈ ಹಿಂದೆ ಕೂಡಾ ಸ್ಪಿರಿಟ್ ಕಳ್ಳ ಸಾಗಾಟ ಮಾಡುತ್ತಿದ್ದು, ಈತನ ವಿರುದ್ಧ ಈ ಹಿಂದೆ ಅಬಕಾರಿ ದಳದಲ್ಲಿ ಸ್ಪಿರಿಟ್ ಸಾಗಾಟಕ್ಕೆ ಸಂಬಂಧಪಟ್ಟಂತೆ ಎರಡು ಪ್ರಕರಣ, ಹಾಗೂ ಕೊಣಾಜೆ, ಉಳ್ಳಾಲ, ಹಾಗೂ ವಿಟ್ಲ ಪೊಲೀಸ್ ಠಾಣೆಗಳಲ್ಲಿ ತಲಾ ಒಂದೊಂದು ಪ್ರಕರಣ ದಾಖಲಾಗಿವೆ.

ಪೊಲೀಸ್ ಕಮೀಷನರ್ ಟಿ. ಆರ್. ಸುರೇಶ್ ಅವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಹನುಮಂತರಾಯ ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ. ಉಮಾ ಪ್ರಶಾಂತ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಯಲ್ಲಿ ಮಂಗಳೂರು ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News