×
Ad

ಆಡಳಿತ ಮಂಡಳಿಗೆ ಮಾಹಿತಿ ನೀಡದೆ ವಿದ್ಯಾರ್ಥಿಗಳನ್ನು ಕರೆದೊಯ್ದ ಧರ್ಮಗುರು ವಿರುದ್ಧ ದೂರು

Update: 2017-11-03 23:55 IST

ಉಡುಪಿ, ನ.3: ಕಾರ್ಕಳದ ಮದೀನ ಮಸೀದಿಯ ಮದೀನತುಲ್ ಉಲೂಮ್ ಮದ್ರಸದ ಆಡಳಿತ ಮಂಡಳಿಗೆ ಯಾವುದೇ ಮಾಹಿತಿ ನೀಡದೆ ಮದ್ರಸದ 21  ವಿದ್ಯಾರ್ಥಿಗಳನ್ನು ಅವರ ಹುಟ್ಟೂರಾದ ಬಿಹಾರಕ್ಕೆ ಕರೆದೊಯ್ಯುತ್ತಿದ್ದ ಧರ್ಮಗುರುವನ್ನು ಮಕ್ಕಳ ಸಹಿತ ವಶಕ್ಕೆ ಪಡೆದ ಘಟನೆ ಕುಮಟಾದಲ್ಲಿಂದು ಸಂಜೆ ನಡೆದಿದೆ.

ಬಿಹಾರದ ಧರ್ಮಗುರು ಮುಹಮ್ಮದ್ ತಯ್ಯಿಬ್ ಮದೀನತುಲ್ ಉಲೂಮ್ ಮದ್ರಸದಲ್ಲಿ ಕಲಿಯುತ್ತಿದ್ದ ಬಿಹಾರದ 8ರಿಂದ 16ವರ್ಷದೊಳಗಿನ 21 ಮಕ್ಕಳನ್ನು ಆಡಳಿತ ಕಮಿಟಿಗೆ ಯಾವುದೇ ಮಾಹಿತಿ ನೀಡದೆ ನ.3ರಂದು ನಸುಕಿನ ವೇಳೆ 2 ಗಂಟೆ ಸುಮಾರಿಗೆ ಅಪಹರಿಸಿರುವುದಾಗಿ ಮದ್ರಸ ಆಡಳಿತ ಸಮಿತಿಯ ಪದಾಧಿಕಾರಿ ಅಬ್ದುಲ್ ಸಮದ್ ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದರು.

ಅದರಂತೆ ಆರೋಪಿ ವಿರುದ್ಧ ಅಪಹರಣ ಪ್ರಕರಣ ದಾಖಲಿಸಿಕೊಂಡ ಕಾರ್ಕಳ ಪೊಲೀಸರು ಉತ್ತರ ಕನ್ನಡ ಜಿಲ್ಲಾ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ ಮತ್ಸಗಂಧಾ ಎಕ್ಸ್‌ಪ್ರೆಸ್ ರೈಲಿನಲ್ಲಿ ತೆರಳುತ್ತಿದ್ದ ಮುಹಮ್ಮದ್ ತಯ್ಯಿಬ್ ಮತ್ತು ಮಕ್ಕಳನ್ನು ಕುಮಟಾ ರೈಲ್ವೆ ನಿಲ್ದಾಣದಲ್ಲಿ ಪತ್ತೆ ಹಚ್ಚಿದ್ದಾರೆ.

"ಕೆಲ ತಿಂಗಳ ಹಿಂದೆ ಈ ಮಕ್ಕಳನ್ನು ಮುಹಮ್ಮದ್ ತಯ್ಯಿಬ್ ಮದ್ರಸ ಶಿಕ್ಷಣಕ್ಕಾಗಿ ಬಿಹಾರದಿಂದ ಕಾರ್ಕಳಕ್ಕೆ ಕರೆತಂದಿದ್ದರು. ಇದರ ಪ್ರಯಾಣ ವೆಚ್ಚವನ್ನು ಆಡಳಿತ ಮಂಡಳಿ ಭರಿಸಿತ್ತು. ಆದರೆ ಶಿಕ್ಷಣ ನೀಡುವುದಕ್ಕಾಗಿ ಮಕ್ಕಳ ಪೋಷಕರಿಂದಲೂ ತಯ್ಯಿಬ್ ಹಣ ಪಡೆದು ಕೊಂಡಿದ್ದರು. ಈ ಹಣವನ್ನು ವಾಪಸ್ ಪೋಷಕರಿಗೆ ನೀಡುವಂತೆ ಆಡಳಿತ ಕಮಿಟಿಯು ತ್ವಯ್ಯಿಬ್‌ರನ್ನು ಒತ್ತಾಯಿಸಿತ್ತು. ಈ ವಿಚಾರದಲ್ಲಿ ಉಂಟಾದ ವಿವಾದದ ಹಿನ್ನೆಲೆಯಲ್ಲಿ ತಯ್ಯಿಬ್ ಆಡಳಿತ ಮಂಡಳಿಗೆ ಯಾವುದೇ ಮಾಹಿತಿ ನೀಡದೆ ಮಕ್ಕಳನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಾರೆ" ಎಂದು ಕಾರ್ಕಳ ಸಹಾಯಕ ಪೊಲೀಸ್ ಅಧೀಕ್ಷಕ ರಿಶಿಕೇಶ್ ಸೋನವಾನೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News