×
Ad

ಬೆಳೆ ಸಮೀಕ್ಷೆಗೆ ಗ್ರಾಪಂ ಸಿಬ್ಬಂದಿಗಳ ನೇಮಕ ವಿರೋಧಿಸಿ ಧರಣಿ

Update: 2017-11-04 20:08 IST

ಉಡುಪಿ, ನ.4: ಬೆಳೆ ಸಮೀಕ್ಷೆಗೆ ಗ್ರಾಮಕರಣಿಕರು, ಗ್ರಾಮ ಸಹಾಯಕರು, ಪಿಡಿಓ ಸಹಿತ ಗ್ರಾಪಂ ಸಿಬ್ಬಂದಿಗಳನ್ನು ನಿಯೋಜಿಸಿರುವುದನ್ನು ಹಿಂಪಡೆದು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಜಿಲ್ಲಾ ಬಿಜೆಪಿ ಪಂಚಾಯತ್ ರಾಜ್ ಪ್ರಕೋಷ್ಠದ ನೇತೃತ್ವದಲ್ಲಿ ಶನಿವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗಿತ್ತು.

ಧರಣಿಯನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲೆಯಲ್ಲಿ ಒಟ್ಟು 9.92ಲಕ್ಷ ಆರ್‌ಟಿಸಿಗಳಿದ್ದು, ಒಬ್ಬ ರಿಗೆ ದಿನಕ್ಕೆ 30ರಿಂದ 35 ಆರ್‌ಟಿಸಿಗಳ ಬೆಳೆ ಸಮೀಕ್ಷೆ ಮಾಡಬಹುದಾಗಿದೆ. ಹೀಗೆ ಆದರೆ ಅಧಿಕಾರಿಗಳು ಇದೇ ಕೆಲಸ ಮಾಡಿಕೊಂಡಿರಬೇಕಾಗುತ್ತದೆ. ರಾಜ್ಯ ಸರಕಾರ ಬಾಪೂಜಿ ಕೇಂದ್ರದ ಮೂಲಕ ಗ್ರಾಪಂಗಳಿಗೆ ಬೀಗ ಜಡಿಯುವ ಕೆಲಸ ಮಾಡುತ್ತಿದೆ ಎಂದು ದೂರಿದರು.

ಜಿಲ್ಲೆಯಲ್ಲಿ ಸಾಕಷ್ಟು ಮಂದಿ ನಿರುದ್ಯೋಗಿ ಯುವಕರಿದ್ದು, ಅವರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿ ಬೆಳೆ ಸಮೀಕ್ಷೆ ಕೆಲಸ ಮಾಡಬೇಕು. ವಾರದಲ್ಲಿ ಮೂರು ದಿನ ಗ್ರಾಪಂ ಅಧಿಕಾರಿಗಳು ಕಚೇರಿಯಲ್ಲಿ ಸಿಗದಿದ್ದರೆ ಮುಂದೆ ಜಿಲ್ಲಾ ಧಿಕಾರಿ ಕಚೇರಿ ಒಳಗಡೆ ಧರಣಿ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಶೆಟ್ಟಿ ಮಾತನಾಡಿ, ಸರಕಾರ ಇತರ ಕೆಲಸಗಳಿಂದಾಗಿ ಅಧಿಕಾರಿಗಳು ಕಚೇರಿಯಲ್ಲಿ ಸಿಗುತ್ತಿಲ್ಲ. ಹೀಗಾಗಿ ಸಾರ್ವ ಜನಿಕರು ಸರಕಾರಿ ಇಲಾಖೆಯಲ್ಲಿನ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿ ಕೊಳ್ಳಲು ಪ್ರತಿನಿತ್ಯ ಪರದಾಡುವಂತಾಗಿದೆ. ಆದುದರಿಂದ ಸರಕಾರ ಬೆಳೆ ಸಮೀಕ್ಷೆಗೆ ಅಧಿಕಾರಿಗಳನ್ನು ನಿಯೋಜಿಸಿರುವುದನ್ನು ಕೈಬಿಟ್ಟು ಗುತ್ತಿಗೆ ಆಧಾರ ದಲ್ಲಿ ಬೇರೆಯವರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಧರಣಿಯಲ್ಲಿ ಮಾಜಿ ಶಾಸಕ ಲಾಲಾಜಿ ಆರ್.ಮೆಂಡನ್, ಜಿಪಂ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಪ್ರಕೋಷ್ಠದ ಜಿಲ್ಲಾ ಸಂಚಾಲಕ ಸಾಣೂರು ನರಸಿಂಹ ಕಾಮತ್, ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಪಂ ಸದಸ್ಯರಾದ ಶಿಲ್ಪಾ ಸುವರ್ಣ, ಗೀತಾಂಜಲಿ ಸುವರ್ಣ, ಉದಯ ಕೋಟ್ಯಾನ್, ಬಾಬು ಶೆಟ್ಟಿ, ಮುಖಂಡರಾದ ಯಶ್ಪಾಲ್ ಸುವರ್ಣ, ಕುತ್ಯಾರು ನವೀನ್ ಶೆಟ್ಟಿ ಕಟಪಾಡಿ ಶಂಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News