ಗರ್ಭಿಣಿ ಮಹಿಳೆ, ಪೊಲೀಸರ ಮೇಲೆ ಹಲ್ಲೆ ಆರೋಪ: ಸಿಪಿಎಂ ಮುಖಂಡನ ಬಂಧನ
ತಿರುವನಂತಪುರಂ, ನ.4: ತಮ್ಮ ವಾಹನಕ್ಕೆ ಕಾರನ್ನು ಢಿಕ್ಕಿ ಹೊಡೆಸಿದರು ಎಂದು ಆಕ್ರೋಶಗೊಂಡ ಸ್ಥಳೀಯ ಸಿಪಿಐ(ಎಂ) ಮುಖಂಡ ಮತ್ತವರ ಮೂವರು ಸ್ನೇಹಿತರು ಗರ್ಭಿಣಿ ಮಹಿಳೆಗೆ ಹಲ್ಲೆ ನಡೆಸಿದ ಘಟನೆ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ.
ಸ್ಥಳೀಯ ಪಂಚಾಯತ್ ಸದಸ್ಯ, ಸಿಪಿಐ(ಎಂ) ಮುಖಂಡ ಅಂಟೋನಿಯೊ ವಿಲಿಯಮ್ಸ್ ಮತ್ತಾತನ ಮೂವರು ಸ್ನೇಹಿತರು ಪ್ರಯಾಣಿಸುತ್ತಿದ್ದ ಕಾರಿಗೆ ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಕಾರು ಢಿಕ್ಕಿಯಾಗಿದೆ. ಬಳಿಕ ಇಬ್ಬರ ಮಧ್ಯೆ ವಾಗ್ವಾದ ನಡೆದಿದ್ದು, ವಿಲಿಯಮ್ಸ್ ಮತ್ತವರ ಸ್ನೇಹಿತರು ಮಹಿಳೆಯನ್ನು ಕಾರಿನಿಂದ ಹೊರಕ್ಕೆಳೆದು ಆಕೆಯ ಹೊಟ್ಟೆಗೆ ಕಾಲಿಂದ ತುಳಿದಿದ್ದಾರೆ ಎಂದು ಆರೋಪಿಸಲಾದೆ. ಇದನ್ನು ಪ್ರಶ್ನಿಸಿದ ಇತರ ವಾಹನ ಸವಾರರ ಮೇಲೆಯೂ ಹಲ್ಲೆಗೆ ಮುಂದಾಗಿದ್ದಾರೆ ಎಂದು ದೂರಲಾಗಿದೆ. ಮಹಿಳೆ ಆಸ್ಪತ್ರೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ . ಬಳಿಕ ಸ್ಥಳೀಯರ ನೆರವಿನಿಂದ ಸಿಪಿಐ(ಎಂ) ಮುಖಂಡ ಮತ್ತವರ ಸ್ನೇಹಿತರನ್ನು ಪೊಲೀಸರು ಬಂಧಿಸಿ ಠಾಣೆಗೆ ಕರೆದೊಯ್ದರು.
ಪೊಲೀಸ್ ಠಾಣೆಯಲ್ಲಿ ಮತ್ತೆ ದಾಂಧಲೆ ನಡೆಸಿದ ಆರೋಪಿಗಳು ಇಬ್ಬರು ಕಾನ್‌ಸ್ಟೆಬಲ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಹಲ್ಲೆ ನಡೆಸಿದ್ದ ಘಟನೆಯ ವೀಡಿಯೊ ದೃಶ್ಯವನ್ನು ಕೆಲವರು ಚಿತ್ರೀಕರಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು ಇದು ವೈರಲ್ ಆಗಿದೆ. ವಿಲಿಯಮ್ಸ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಿಪಿಐ(ಎಂ) ಕೊಲ್ಲಂ ಜಿಲ್ಲಾ ಘಟಕ ತಿಳಿಸಿದೆ.