ನ್ಯಾ. ಅಬ್ದುಲ್ ನಝೀರ್‌ರಿಂದ ವಕೀಲರಿಗೆ ಸಾಮೂಹಿಕ ವಿಮೆ ಸೌಲಭ್ಯ ಅನಾವರಣ

Update: 2017-11-04 15:26 GMT

ಮಂಗಳೂರು, ನ.4: ವಕೀಲರ ಸಂಘದ ಆಶ್ರಯದಲ್ಲಿ ನ್ಯಾಯಾಲಯ ಸಂಕೀರ್ಣದ 6ನೇ ಮಹಡಿಯ ಸಭಾಂಗಣದಲ್ಲಿ ಇಂದು ವಕೀಲರಿಗೆ ಸಾಮೂಹಿಕ ವಿಮೆ ಸೌಲಭ್ಯವನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಅಬ್ದುಲ್ ನಝೀರ್ ಅನಾವರಣಗೊಳಿಸಿದರು.

ಕನ್ನಡದಲ್ಲಿಯೇ ಮಾತು ಆರಂಭಿಸಿದ ನ್ಯಾ. ಅಬ್ದುಲ್ ನಝೀರ್, ಇಂದು ನಾನು ಸುಪ್ರೀಂಕೋರ್ಟ್ ನ್ಯಾಯಾಧೀಶನಾಗಿರುವುದಕ್ಕೆ ದೇವರ ದಯೆ ಹಾಗೂ ನಿಮ್ಮೆಲ್ಲರ ಕೃಪೆ ಕಾರಣ ಎಂದು ಭಾವನಾತ್ಮಕವಾಗಿ ನುಡಿದರು.

ತಾನೊಬ್ಬ ಲಕ್ಕೀ ಪರ್ಸನ್ ಎಂದೆನಿಸುತ್ತಿದೆ ಎಂದು ಹೇಳಿದ ಅವರು, ಕಾರ್ಕಳದಲ್ಲಿ ತಾನು ವಕೀಲ ವೃತ್ತಿ ಆರಂಭಿಸಿದಾಗ ಎಂ.ಕೆ. ವಿಜಯ ಕುಮಾರ್ ಅವರಂತಹ ಗುರು ಸಿಕ್ಕಿರುವುದು ತ್ನ ಪುಣ್ಯ ಎಂದು ನೆನಪಿಸಿಕೊಂಡರು.

ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಮೂರ್ತಿ ಅಬ್ದುಲ್ ನಜೀರ್ ಅವರ ಪತ್ನಿ, ನ್ಯಾಯಮೂರ್ತಿ ಕೆ.ಎಸ್. ಬೀಳಗಿ, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಂ. ಆರ್. ಬಳ್ಳಾಲ್, ನ್ಯಾಯವಾದಿ ಪಿ.ಪಿ. ಹೆಗ್ಡೆ ಮುಂತಾದವರು ಉಪಸ್ಥಿತರಿದ್ದರು.

ಜೀವನದಲ್ಲಿ ನಮಗೆ ವೌಲ್ಯಗಳೇ ಮುಖ್ಯ ಹೊರತು ಹಣ ಮುಖ್ಯವಲ್ಲ. ನ್ಯಾಯವಾದಿಯಾಗಿದ್ದ ಸಮಯದಲ್ಲಿ 50 ಸಾವಿರ ರೂ. ಫೀಸು ಬದಲಿಗೆ 500 ರೂ. ಫೀಸ್ ತೆಗೆದುಕೊಳ್ಳುವುದರಲ್ಲೇ ನನಗೆ ಖುಷಿ ಸಿಗುತ್ತಿತ್ತು ಎಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜಾನ್ ಮೈಕಲ್ ಡಿಕುನ್ಹಾ ಹೇಳಿದರು.
ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ಕುರಿತು ವಿಚಾರಣೆ ನಡೆಸಿದ ಜಸ್ಟೀಸ್ ಡಿಕುನ್ಹಾ ಅವರು ಜಯಲಲಿತಾ ಅವರಿಗೆ ಜೈಲು ಶಿಕ್ಷೆ ವಿಧಿಸಿದ್ದರು.
 

ಮಂಗಳೂರಿಗೆ ಬಂದಾಗ ತವರಿನ ಹಿತಾನುಭವ!
ತವರಿಗೆ ಬಂದಾಗ ಹೆಣ್ಣು ಮಕ್ಕಳು ಅನುಭವಿಸುವ ಹಿತಾನುಭವನ್ನು ಮಂಗಳೂರಿಗೆ ಬಂದಾಗ ನಾನು ಅನುಭವಿಸುತ್ತಿದ್ದೇನೆ. ಭಾವನೆಗಳೇ ಹೆಚ್ಚಾದಾಗ ಮಾತುಗಳು ಕಡಿಮೆಯಾಗುತ್ತದೆ. ಹಾಗಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಯಾಧೀಶರಾದ ಜಸ್ಟೀಸ್ ಅಬ್ದುಲ್ ನಜೀರ್‌ರವರು ಭಾವನಾತ್ಮಕಾಗಿ ನುಡಿದರು.
 

ಗುರು- ಶಿಷ್ಯರ ಸಮಾಗಮ
ಜಿಲ್ಲಾ ನ್ಯಾಯಾಲಯದ ಸಂಕೀರ್ಣವು ಗುರುಶಿಷ್ಯರಿಬ್ಬರ ಸಮಾಗಮಕ್ಕೆ ಸಾಕ್ಷಿಯಾಯಿತು. ವಕೀಲಿ ವೃತ್ತಿಯ ವೇಳೆ ಶಿಷ್ಯನಾಗಿದ್ದವರು ಇಂದು ನ್ಯಾಯಾಧೀಶರಾಗಿದ್ದರೆ, ಗುರು ಇಂದು ಹಿರಿಯ ನ್ಯಾಯವಾದಿಯಾಗಿ ಗುರುತಿಸಿಕೊಂಡಿದ್ದಾರೆ. ಕಾರ್ಕಳದ ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್ ಅವರು ಗುರುವಾದರೆ ಸುಪ್ರೀಂಕೋರ್ಟ್ ನ್ಯಾಯಾಧೀಶ ಜಸ್ಟೀಸ್ ಅಬ್ದುಲ್ ನಝೀರ್ ಶಿಷ್ಯ. ವಿಜಯ ಕುಮಾರ್ ಅವರು ತನ್ನ ಶಿಷ್ಯನ ಸರಳತೆ ಕುರಿತಂತೆ ಮಾನತಾಡುತ್ತಾ, ನ್ಯಾಯಾಂಗದಲ್ಲಿ ಘನತೆ ಮತ್ತು ಮಾನವೀಯತೆ ಒಟ್ಟಾಗಿದೆ ಎಂದು ಹೆಮ್ಮೆ ಪಟ್ಟುಕೊಂಡರು.

ನ್ಯಾ. ನಝೀರ್‌ರವರು ತುಳುವಿನಲ್ಲಿ ‘ಸರ್ ಎಂಚ ಉಲ್ಲರ್?’ (ಸರ್, ಹೇಗಿದ್ದೀರಿ) ಎಂದು ಪ್ರಶ್ನಿಸಿದರು. ನನಗೆ ಯಾರೆಂದು ಗೊತ್ತಾಗದೆ ಪ್ರಶ್ನಿಸಿದೆ. ‘ಸರ್ ಯಾನ್ ನಝೀರ್’ (ಸರ್, ನಾನು ನಝೀರ್) ಎಂದರು. ನನಗಾಗಲೂ ಗೊತ್ತಾಗದೆ ಮರು ಪ್ರಶ್ನಿಸಿದರೆ, ‘ಯಾನ್ ಜಡ್ಜ್ ನಝೀರ್’(ನಾನು ಜಡ್ಜ್ ನಝೀರ್) ಅಂತ ಹೇಳಿಕೊಂಡ ಸರಳ ವ್ಯಕ್ತಿ ಅವರು ಎಂದು ವಿಜಯ ಕುಮಾರ್ ತಮ್ಮ ಶಿಷ್ಯನನ್ನು ಬಣ್ಣಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News