ಇನ್ನು ಮುಂದೆ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಸಿಗಲಿದೆ ಕರವಸ್ತ್ರ, ತಲೆದಿಂಬು ಚೀಲ

Update: 2017-11-04 16:18 GMT

ಮುಂಬೈ, ನ. 4: ನೈರ್ಮಲ್ಯ ಹಾಗೂ ವೆಚ್ಚ ಉಳಿಸುವ ಕ್ರಮಗಳ ಆಯ್ಕೆಗೆ ಸಂಬಂಧಿಸಿದ ದೂರುಗಳನ್ನು ಗಮನಿಸಿ ಪಶ್ಚಿಮ ರೈಲ್ವೆ ಮೂರನೇ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪರಿಸರ ಸ್ನೇಹಿ ಬಳಸಿ ಎಸೆಯುವ ಕರವಸ್ತ್ರ ಹಾಗೂ ತಲೆದಿಂಬು ಚೀಲಗಳನ್ನು ಪರಿಚಯಿಸಲಿದೆ.

 ಮೂರನೇ ರಾಜಧಾನಿ ರೈಲನ್ನು ಬಾಂದ್ರಾ ಟರ್ಮಿನಸ್ ಹಾಗೂ ಹಝ್ರತ್ ನಿಝಾಮುದ್ದೀನ್ ನಡುವೆ ಅಕ್ಟೋಬರ್ 16ರಂದು ಆರಂಭಿಸಲಾಗಿದೆ.

ನೈರ್ಮಲ್ಯಕ್ಕೆ ಸಂಬಂಧಿಸಿ ಪಶ್ಚಿಮ ರೈಲ್ವೆಯ ಮುಂಬೈ ವಿಭಾಗ ಪ್ರತಿ ತಿಂಗಳು ಸರಾಸರಿ 5 ದೂರು ಸ್ವೀಕರಿಸುತ್ತಿದೆ. ಇನ್ನೊಂದು ಕಳವಳಕಾರಿ ವಿಚಾರವೆಂದರೆ ರೈಲಿನಲ್ಲಿ ನಡೆಯುತ್ತಿರುವ ಕಳವು. ಪಶ್ಚಿಮ ರೈಲ್ವೆಯಿಂದ ಮುಂಬೈ ಹಾಗೂ ಇತರ ನಗರಗಳ ನಡುವೆ ಸಂಚರಿಸುತ್ತಿರುವ ರೈಲಿನಲ್ಲಿ ಪ್ರತಿ ತಿಂಗಳು ಸುಮಾರು 70 ಕರವಸ್ತ್ರಗಳು ಕಾಣೆಯಾಗುತ್ತಿವೆ. ರಾಜಧಾನಿ ಎಕ್ಸ್‌ಪ್ರೆಸ್‌ನ ಶೇ. 90 ಪ್ರಯಾಣಿಕರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಉಳಿದವರು ಇನ್ನೂ ಹೆಚ್ಚಿನ ನ್ಯಾಪ್ಕಿನ್ ಆಗ್ರಹಿಸಿದ್ದಾರೆ. ಆದರೆ, ಗುಣಮಟ್ಟವನ್ನು ಪ್ರಶ್ನಿಸಿಲ್ಲ ಎಂದು ಪಶ್ಚಿಮ ರೈಲ್ವೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರವೀಂದರ್ ಭಾಸ್ಕರ್ ತಿಳಿಸಿದ್ದಾರೆ.

  ಮುಂಬೈ-ಜೈಪುರ ಸೆಂಟ್ರಲ್ ನಡುವೆ ಸಂಚರಿಸುವ ರೈಲಿನಲ್ಲಿ ಕಳೆದ ವರ್ಷ ಈ ಉತ್ಪನ್ನವನ್ನು ಪ್ರಯೋಗಾರ್ಥವಾಗಿ ಪರಿಚಯಿಸಲಾಗಿದೆ. ಇತರ ರೈಲುಗಳಿಗೆ ಈ ಯೋಜನೆ ವಿಸ್ತರಿಸುವ ಮೊದಲು ಇನ್ನಷ್ಟು ಪ್ರಯೋಗಗಳನ್ನು ನಡೆಸಲು ರೈಲ್ವೆ ಮಂಡಳಿ ನಿರ್ಧರಿಸಿದೆ.

 ಬಳಸಿ ಬಿಸಾಡುವ ಕರವಸ್ತ್ರ ಹಾಗೂ ತಲೆದಿಂಬು ಚೀಲಕ್ಕೆ ಹತ್ತಿಯ ಸಾಮಗ್ರಿಗಳನ್ನು ಬಳಸಲಾಗುತ್ತದೆ. ಆದರೆ, ಇದು ಜೈವಿಕವಾಗಿ ವಿಘಟನೆಗೊಳ್ಳುವ ವಸ್ತು. ವೆಚ್ಚದ ದೃಷ್ಟಿಯಿಂದಲೂ ಇಂದು ತುಂಬಾ ಲಾಭದಾಯಕ. ಸಾಂಪ್ರದಾಯಿಕ ವಸ್ತುಗಳಿಗೆ ತೊಳೆಯಲು, ನಿರ್ವಹಿಸಲು 6 ರೂ. ವೆಚ್ಚವಾಗುತ್ತದೆ. ಆದರೆ, ಬಳಸಿ ಬಿಸಾಡುವ ಈ ವಸ್ತುಗಳಿಗೆ 4.75 ರೂ. ವೆಚ್ಚವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News